ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವೈಸಿಎಸ್ ಯುವೋತ್ಸವ

ಮಂಗಳೂರು : ನಗರದ ಡೀನರಿಯ ವೈಸಿಎಸ್ (ಯಂಗ್ ಕ್ರಿಶ್ಚಿಯನ್ ಸ್ಟೂಡೆಂಟ್ಸ್) ಘಟಕಗಳ ಸಭೆಯಾದ ವೈಸಿಎಸ್ ಯುವೋತ್ಸವ 2021 ಅನ್ನು ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್‍ಜೆಇಸಿ) ಆಯೋಜಿಸಿತು.
ವೈಸಿಎಸ್ ಸದಸ್ಯರ ಜೊತೆಗೆ ವಾಮಂಜೂರು, ಕೊರ್ಡೆಲ್, ಶಕ್ತಿನಗರ, ಬಜಾಲ್, ಬಜ್ಜೋಡಿ, ಬೋಂದೆಲ್, ದೇರೆಬೈಲ್, ಕೆಲರಾಯ್, ನೀರುಮಾರ್ಗ ಮತ್ತು ಪೆರ್ಮಯಿ ಚರ್ಚ್‍ಗಳ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 240 ವೈಸಿಎಸ್ ಸದಸ್ಯರು ಈ ಮೆಗಾ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಕಾಲೇಜಿನ ಸಂತ ಪಿಯೋ ಚಾಪೆಲ್‍ನಲ್ಲಿ ಪವಿತ್ರ ಸಾಮೂಹಿಕ ಪೂಜೆಯ ಮೂಲಕ ಸಭೆ ಪ್ರಾರಂಭವಾಯಿತು. ವೈಸಿಎಸ್ ನಿರ್ದೇಶಕರಾದ ವಂ ರೂಪೇಶ್ ಡಿ'ಸೋಜ, ಎಸ್‍ಜೆಇಸಿಯ ನಿರ್ದೇಶಕರಾದ ವಂ ವಿಲ್ಫ್ರೆಡ್ ಪ್ರಕಾಶ್ ಡಿಸೋಜ, ಎಸ್‍ಜೆಇಸಿಯ ಸಹಾಯಕ ನಿರ್ದೇಶಕ ಹಾಗೂ ವೈಸಿಎಸ್ ಮಂಗಳೂರು ನಗರ ಡೀನರಿಯ ನಿರ್ದೇಶಕರಾದ ವಂ ಅಲ್ವಿನ್ ಡಿಸೋಜ, ಕಾಜೇಜಿನ ಸಹಾಯಕ ನಿರ್ದೇಶಕರಾದ ವಂ. ರೋಹಿತ್ ಡಿ'ಕೊಸ್ತಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೈಸಿಎಸ್ ಯುವೊತ್ಸವದ ಉದ್ಘಾಟನೆಯು ಕಾಲೇಜಿನ ಕಲಾಂ ಸಭಾಂಗಣದಲ್ಲಿ ದೀಪವನ್ನು ಬೆಳಗಿಸುವುದರ ಮೂಲಕ ನಡೆ ಯಿತು. ಉದ್ಘಾಟನೆಯ ಬಳಿಕ ಮೈಮ್ ಶೋ, ಗುಂಪು ನರ್ತನ, ಸೆಲ್ಫಿ ಸ್ಪರ್ಧೆ, ಗುಂಪು ಗಾಯನ ಸೇರಿದಂತೆ ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಇವುಗಳ ಜೊತೆಗೆ ಇಂಟರ್ ಪ್ಯಾರಿಷ್ ಕ್ರಿಕೆಟ್ ಮತ್ತು ಥ್ರೋಬಾಲ್ ಪಂದ್ಯಾವಳಿಗಳು ಸಹ ಆಯೋಜಿಸಲ್ಪಟ್ಟವು.
ಕಾಲೇಜಿನ ಹೊಸದಾಗಿ ಉದ್ಘಾಟಿಸಲಾದ ಆಂಫಿಥಿಯೇಟ್‍ರ್‍ನಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಿತು.







