ಆಮ್ಲಜನಕ ಕೇಳಲು ಬಂದ ವ್ಯಕ್ತಿಗೆ ಕಪಾಳಮೋಕ್ಷದ ಬೆದರಿಕೆ ಹಾಕಿದ ಕೇಂದ್ರ ಸಚಿವ!

ಹೊಸದಿಲ್ಲಿ: ಕೋವಿಡ್ ಪೀಡಿತ ತಾಯಿಗೆ ಆಕ್ಸಿಜನ್ ಒದಗಿಸುವಂತೆ ಬೇಡಿಕೊಂಡ ವ್ಯಕ್ತಿಗೆ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರು ಕಪಾಳಮೋಕ್ಷ ಮಾಡುವುದಾಗಿ ಬೆದರಿಕೆ ಹಾಕುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
"ನಮಗೆ ಸಿಲಿಂಡರ್ ಸಿಗಲಿಲ್ಲ" ಎಂದು ವ್ಯಕ್ತಿಯೊಬ್ಬರು ಮಧ್ಯಪ್ರದೇಶದ ದಮೋಹ್ ಆಸ್ಪತ್ರೆಯಲ್ಲಿ ಸಚಿವರಿಗೆ ದೂರು ನೀಡಿದರು.
"ನೀನು ಈ ರೀತಿ ಮಾತನಾಡಿದರೆ ನಿನ್ನ ಕಪಾಳಕ್ಕೆ ಎರಡು ಬಾರಿಸುವೆ" ಎಂದು ಬೆದರಿಸಿದ ಸಚಿವರು ವ್ಯಕ್ತಿಯನ್ನು ಶಾಂತಗೊಳಿಸಲು ಯತ್ನಿಸಿದರು.
ಆಗ ಅಳಲಾರಂಭಿಸಿದ ವ್ಯಕ್ತಿ "ಹೌದು, ನನಗೆ ಅದುವೇ ಸಿಗುತ್ತದೆ ಎಂದು ಗೊತ್ತಿದೆ. ನನ್ನ ತಾಯಿ ಅಲ್ಲಿಯೇ ಮಲಗಿದ್ದಾಳೆ’’ ಎಂದರು.
ಆಗ ವ್ಯಕ್ತಿಯ ಮಾತನ್ನು ತಡೆದ ಸಚಿವರು "ಯಾರಾದರೂ ನಿಮಗೆ ಆಮ್ಲಜನಕ ಸಿಲಿಂಡರ್ ನಿರಾಕರಿಸಿದ್ದಾರೆಯೇ? ಎಂದು ಕೇಳಿದರು. ಆಗ ಆ ವ್ಯಕ್ತಿ, "ಹೌದು, ಅವರು ನಿರಾಕರಿಸಿದರು, ನಮಗೆ ಐದು ನಿಮಿಷ ಮಾತ್ರ ಆಕ್ಸಿಜನ್ ಸಿಕ್ಕಿತು" ಎಂದು ಉತ್ತರಿಸಿದರು.
ದಮೋಹ್ ಜಿಲ್ಲಾ ಆಸ್ಪತ್ರೆಯ ಹೊರಗೆ ಈ ಘಟನೆ ನಡೆದಿದ್ದು, ರೋಗಿಗಳ ಸಂಬಂಧಿಕರು ಹಿಂದಿನ ದಿನ ಆಮ್ಲಜನಕ ಸಿಲಿಂಡರ್‌ಗಳನ್ನು ಲೂಟಿ ಮಾಡಿದ್ದರು.
ಜಿಲ್ಲೆಯಲ್ಲಿ 3,320 ಕೋವಿಡ್ ರೋಗಿಗಳಿದ್ದಾರೆ. ಕಳೆದ 24 ಗಂಟೆಗಳಲ್ಲಿ ಪ್ರಕರಣಗಳ ಸಂಖ್ಯೆ 101 ರಷ್ಟು ಏರಿಕೆಯಾಗಿದೆ.