ಕೋವಿಡ್ ನಿರ್ವಹಣೆ ಕುರಿತ ಸುಪ್ರೀಂ ವಿಚಾರಣೆ: ಅಮಿಕಸ್ ಕ್ಯೂರಿ ಹುದ್ದೆಯಿಂದ ಹಿಂದೆ ಸರಿದ ಹರೀಶ್ ಸಾಳ್ವೆ

ಹೊಸದಿಲ್ಲಿ,ಎ.23: ಕೊರೋನವೈರಸ್ ಸಾಂಕ್ರಾಮಿಕ ನಿರ್ವಹಣೆಗಾಗಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಕ್ಕೆ ಹಿರಿಯ ನ್ಯಾಯವಾದಿಗಳ ಟೀಕೆಗಳಿಗೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತು.
ಹಿರಿಯ ನ್ಯಾಯವಾದಿಗಳು ಪ್ರಕರಣದಲ್ಲಿಯ ನ್ಯಾಯಾಧೀಶರ ಮೇಲೆ ಆರೋಪಗಳನ್ನು ಹೊರಿಸಿದ್ದಾರೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠವು,ಉಚ್ಚ ನ್ಯಾಯಾಲಯಗಳಿಂದ ಕೋವಿಡ್-19 ಪ್ರಕರಣಗಳನ್ನು ಹಸ್ತಾಂತರಿಸಿಕೊಳ್ಳುವ ಯಾವುದೇ ಉದ್ದೇಶ ಸರ್ವೋಚ್ಚ ನ್ಯಾಯಾಲಯಕ್ಕಿಲ್ಲ ಎಂದು ಸ್ಪಷ್ಟಪಡಿಸಿತು. ಶುಕ್ರವಾರ ಬೋಬ್ಡೆ ಅವರ ಸೇವಾವಧಿಯ ಕೊನೆಯ ದಿನವಾಗಿತ್ತು.
ನೀವು ಆದೇಶವನ್ನು ಓದಿದ್ದೀರಿ ಎಂದು ಸರ್ವೋಚ್ಚ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ವಿಕಾಸ ಸಿಂಗ್ ಅವರನ್ನು ಉದ್ದೇಶಿಸಿ ಹೇಳಿದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಎಸ್.ರವೀಂದ್ರ ಭಟ್ ಅವರನ್ನೂ ಒಳಗೊಂಡಿದ್ದ ಪೀಠವು,‘ಪ್ರಕರಣವನ್ನು ವರ್ಗಾಯಿಸುವ ಯಾವುದೇ ಉದ್ದೇಶ ಅದರಲ್ಲಿದೆಯೇ? ನಮ್ಮ ಮಾತನ್ನು ಕೇಳಿ,ಆದೇಶವನ್ನು ಓದುವ ಮೊದಲೇ ಅದರಲ್ಲಿಲ್ಲದ ವಿಷಯದ ಬಗ್ಗೆ ಟೀಕೆಗಳನ್ನು ಮಾಡಲಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯವನ್ನು ಹೇಗೆ ಹಾಳು ಮಾಡಲಾಗುತ್ತಿದೆ ಎನ್ನುವುದನ್ನು ಇದು ತೋರಿಸುತ್ತಿದೆ’ ಎಂದು ಕುಟುಕಿತು. ಕೋವಿಡ್-19 ಸ್ಥಿತಿಯ ಬಗ್ಗೆ ತಕ್ಷಣದ ವರದಿಗಳನ್ನು ಪಡೆದುಕೊಳ್ಳುವ ಮತ್ತು ಪ್ರಕರಣಗಳಲ್ಲಿ ಚುರುಕಾಗಿ ಆದೇಶಗಳನ್ನು ಹೊರಡಿಸುವ ಅನುಕೂಲಗಳನ್ನು ಉಚ್ಚ ನ್ಯಾಯಾಲಯಗಳು ಹೊಂದಿವೆ ಎಂದು ಬೆಟ್ಟು ಮಾಡಿದ್ದ ಸರ್ವೋಚ್ಚ ನ್ಯಾಯಾಲಯದ ವಕೀಲರ ಸಂಘವು ,ಸುಪ್ರೀಂ ಆದೇಶದ ವಿರುದ್ಧ ಅದಕ್ಕೆ ಅರ್ಜಿ ಸಲ್ಲಿಸಿತ್ತು.
‘ನೀವು ಆದೇಶವನ್ನು ಓದದೆ ನಮ್ಮ ಮೇಲೆ ದೋಷಾರೋಪಣೆ ಮಾಡಿದ್ದೀರಿ ’ ಎಂದು ನ್ಯಾ.ರಾವ್ ಅವರು ಗುಜರಾತ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳ ಸಂಘವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ ದವೆಯವರನ್ನು ಉದ್ದೇಶಿಸಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದವೆ,ಉಚ್ಚ ನ್ಯಾಯಾಲಯಗಳು ವಿಚಾರಣೆ ನಡೆಸುತ್ತಿರುವ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ ಎಂದು ಪ್ರತಿಯೊಬ್ಬರೂ ಭಾವಿಸಿದ್ದರು ಎಂದರು.
‘ನಾವು ಆ ಬಗ್ಗೆ ಒಂದೇ ಒಂದು ಶಬ್ದವನ್ನು ನುಡಿದಿರಲಿಲ್ಲ ಮತ್ತು ವಿಚಾರಣೆಗಳಿಂದ ಉಚ್ಚ ನ್ಯಾಯಾಲಯಗಳನ್ನು ತಡೆದಿರಲಿಲ್ಲ ’ಎಂದು ತಿರುಗೇಟು ನೀಡಿದ ನ್ಯಾ.ಭಟ್,‘ಉಚ್ಚ ನ್ಯಾಯಾಲಯಗಳಿಗೆ ತೆರಳುವಂತೆ ಮತ್ತು ಅಲ್ಲಿ ವರದಿ ಮಾಡಿಕೊಳ್ಳುವಂತೆ ನಾವು ಕೇಂದ್ರಕ್ಕೆ ಸೂಚಿಸಿದ್ದೆವು. ನೀವು ಯಾವ ಬಗೆಯ ಗ್ರಹಿಕೆಯ ಬಗ್ಗೆ ಮಾತನಾಡುತ್ತಿದ್ದೀರಿ ’ ಎಂದು ಪ್ರಶ್ನಿಸಿದರು.
ಉಚ್ಚ ನ್ಯಾಯಾಲಯಗಳಲ್ಲಿ ಬಾಕಿಯುಳಿದಿರುವ ಪ್ರಕರಣಗಳು ಗೊಂದಲಗಳನ್ನು ಸೃಷ್ಟಿಸುತ್ತಿವೆ,ಹೀಗಾಗಿ ಅವುಗಳನ್ನು ಹಿಂದೆಗೆದುಕೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರದ ವಿಚಾರಣೆ ವೇಳೆ ನಿರ್ದೇಶ ನೀಡಿತ್ತು.
ಹಿರಿಯ ವಕೀಲರ ಅಭಿಪ್ರಾಯಗಳಿಂದ ಪೀಠಕ್ಕೆ ನಿರಾಶೆಯಾಗಿದೆ ಎಂದು ಹೇಳಿದ ನ್ಯಾ.ಬೋಬ್ಡೆ,ಆದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯಗಳಿರುತ್ತವೆ ಎಂದರು.
ಸ್ವಯಂಪ್ರೇರಿತ ಪ್ರಕರಣದಲ್ಲಿ ಹಿರಿಯ ವಕೀಲ ಹರೀಶ ಸಾಳ್ವೆ ಅವರನ್ನು ಅಮಿಕಸ್ ಕ್ಯೂರಿ ಆಗಿ ನೇಮಕಗೊಳಿಸಿದ್ದು ಪೀಠದಲ್ಲಿಯ ಎಲ್ಲ ನ್ಯಾಯಾಧೀಶರ ಸಾಮೂಹಿಕ ನಿರ್ಧಾರವಾಗಿತ್ತು ಎಂದು ನ್ಯಾ.ಬೋಬ್ಡೆ ಹೇಳಿದರು.
ಇದಕ್ಕೂ ಮುನ್ನ ಈ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ ಹೊಣೆಯಿಂದ ತನ್ನನ್ನು ಮುಕ್ತಗೊಳಿಸುವಂತೆ ಕೋರಿದ್ದ ಸಾಳ್ವೆ,‘ಮುಖ್ಯ ನ್ಯಾಯಮೂರ್ತಿಗಳ ಶಾಲಾದಿನಗಳ ಗೆಳೆತನದಿಂದಾಗಿ ನನ್ನನ್ನು ನೇಮಕಗೊಳಿಸಲಾಗಿದೆ ಎಂಬ ಕರಿನೆರಳಿನಡಿ ವಿಚಾರಣೆ ನಡೆಯುವುದನ್ನು ನಾನು ಬಯಸುವುದಿಲ್ಲ ’ಎಂದು ತಿಳಿಸಿದ್ದರು.
ಪ್ರಕರಣದಿಂದ ಹಿಂದೆ ಸರಿಯದಂತೆ ಸಾಳ್ವೆ ಅವರನ್ನು ಕೋರಿಕೊಂಡ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಇಂತಹ ಒತ್ತಡ ತಂತ್ರಗಳಿಗೆ ಯಾರೂ ಬಲಿಯಾಗಬಾರದು ಎಂದು ಹೇಳಿದರು.
ಸಾಳ್ವೆಯವರ ಕೋರಿಕೆಯನ್ನು ಪುರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು,‘ನಾವು ನಿಮ್ಮ ಭಾವನೆಗಳನ್ನು ಗೌರವಿಸುತ್ತೇವೆ ಮತ್ತು ನಿಮಗೆ ಖಂಡಿತವಾಗಿಯೂ ನೋವಾಗಿರಬೇಕು ’ ಎಂದು ಹೇಳಿತು.
ಲಂಡನ್‌ನಲ್ಲಿರುವ ಸಾಳ್ವೆ ತಮಿಳುನಾಡಿನಲ್ಲಿಯ ಸ್ಥಾವರದ ಪುನರಾರಂಭಕ್ಕೆ ನ್ಯಾಯಾಲಯದ ಅನುಮತಿಯನ್ನು ಕೋರಿರುವ ಪ್ರಕರಣದಲ್ಲಿ ವೇದಾಂತ ಲಿ.ಅನ್ನು ಪ್ರತಿನಿಧಿಸುತ್ತಿರುವಾಗ ಅವರನ್ನು ಆಮ್ಲಕಜನಕ ಕೊರತೆಯನ್ನು ನೀಗಿಸುವಲ್ಲಿ ನೆರವಾಗಲು ಅಮಿಕಸ್ ಕ್ಯುರಿಯಾಗಿ ನೇಮಿಸಲಾಗಿತ್ತು. ಸ್ಥಾವರವು ಪರಿಸರ ನಿಯಮಗಳ ಉಲ್ಲಂಘನೆಗಾಗಿ ಸ್ಥಗಿತಗೊಂಡಿರುವಾಗ ಪ್ರಕರಣದಲ್ಲಿ ಅವರ ಹಿತಾಸಕ್ತಿ ಸಂಘರ್ಷವನ್ನು ಹಿರಿಯ ನ್ಯಾಯವಾದಿಗಳು ಬೆಟ್ಟು ಮಾಡಿದ್ದರು.