ಕೋವಿಡ್-19 ಲಸಿಕೆಗೆ ಏಕರೂಪ ದರಕ್ಕೆ ಪ್ರತಿಪಕ್ಷ ನಾಯಕರ ಆಗ್ರಹ

ಹೊಸದಿಲ್ಲಿ,ಎ.23: ಕೊರೋನವೈರಸ್ ಸಾಂಕ್ರಾಮಿಕದ ಭೀಕರ ಎರಡನೇ ಅಲೆಯ ವಿರುದ್ಧ ದೇಶವು ಹೋರಾಡುತ್ತಿರುವ ಈ ಸಂದರ್ಭದಲ್ಲಿ ಲಸಿಕೆಗೆ ಏಕರೂಪ ದರವನ್ನು ನಿಗದಿಗೊಳಿಸುವಂತೆ ಪ್ರತಿಪಕ್ಷ ನಾಯಕರು ಶುಕ್ರವಾರ ಆಗ್ರಹಿಸಿದ್ದಾರೆ.
ಕೇಂದ್ರವು ಲಸಿಕೆ ಅಭಿಯಾನದ ಮೂರನೇ ಹಂತದಡಿ ಲಸಿಕೆ ತಯಾರಿಕೆ ಕಂಪನಿಗಳು ತಮ್ಮ ಶೇ.50ರಷ್ಟು ಉತ್ಪಾದನೆಗಳನ್ನು ರಾಜ್ಯ ಸರಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಮೊದಲ 30 ಕೋಟಿ ಜನರಿಗೆ ಮಾತ್ರ ತಾನು ಲಸಿಕೆಯನ್ನು ಉಚಿತವಾಗಿ ಒದಗಿಸುವುದಾಗಿ ಕೇಂದ್ರವು ಹೇಳಿದೆ. ಅದರ ನಂತರ ಲಸಿಕೆಗಳನ್ನು ಪಡೆಯಲು ಶುಲ್ಕ ಪಾವತಿಸಬೇಕಾಗುತ್ತದೆ.
ಸರಕಾರವು ಲಸಿಕೆ ದರಗಳನ್ನು ನಿಯಂತ್ರಣದಿಂದ ಮುಕ್ತಗೊಳಿಸಿದೆ. ಹೀಗಾಗಿ ಲಸಿಕೆ ಪಡೆಯಲು ವೆಚ್ಚ ಎಲ್ಲ ರಾಜ್ಯಗಳಲ್ಲಿ ಒಂದೇ ಆಗಿರುವುದಿಲ್ಲ. ಸರಕಾರಗಳು ಸಬ್ಸಿಡಿ ಒದಗಿಸದಿದ್ದರೆ ಈವರೆಗೆ ಲಸಿಕೆ ಪಡೆಯದವರಿಗೆ ಅವು ತೀರ ದುಬಾರಿಯಾಗಲಿವೆ.
ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ತನ್ನ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ ಅನ್ನು ರಾಜ್ಯ ಸರಕಾರಗಳಿಗೆ 400 ರೂ.ಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗಳಿಗೆ ಮಾರಾಟ ಮಾಡುವುದಾಗಿ ಪ್ರಕಟಿಸಿದೆ. ಹಾಲಿ ಖರೀದಿ ಬೇಡಿಕೆಯು ಅಂತ್ಯಗೊಂಡ ಬಳಿಕ ಸೀರಮ್ ಕಂಪನಿಯು ಕೇಂದ್ರಕ್ಕೆ ಕೋವಿಶೀಲ್ಡ್ ಲಸಿಕೆಯನ್ನು ಪ್ರತಿ ಡೋಸ್ಗೆ 400 ರೂ.ನಂತೆ ಮಾರಾಟ ಮಾಡಲಿದೆ. ಈವರೆಗೆ ಕೇಂದ್ರವು ಪ್ರತಿ ಡೋಸ್ಗೆ 150 ರೂ.ನಂತೆ ಖರೀದಿಸುತ್ತಿತ್ತು ಮತ್ತು ಸರಕಾರಿ ಆಸ್ಪತ್ರೆಗಳು ಲಸಿಕೆಯನ್ನು ಉಚಿತವಾಗಿ ವಿತರಿಸಲು ಅವಕಾಶವನ್ನು ನೀಡಿತ್ತು.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆದ ವರ್ಚುಚಲ್ ಸಭೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಲಸಿಕೆಗಾಗಿ ರಾಜ್ಯ ಸರಕಾರಗಳಿಗೆ ಮತ್ತು ಕೇಂದ್ರಕ್ಕೆ ವಿಭಿನ್ನ ದರಗಳನ್ನು ಆಕ್ಷೇಪಿಸಿದರು. ‘ಒಂದು ದೇಶ ಒಂದು ದರ ’ ನೀತಿಯನ್ನು ಅನುಸರಿಸಬೇಕು ಎಂದು ಅವರು ಆಗ್ರಹಿಸಿದರು.
ಲಸಿಕೆಗಳಿಗೆ ವಿಭಿನ್ನ ದರಗಳನ್ನು ನಿಗದಿಗೊಳಿಸಿರುವ ಸರಕಾರದ ನಿರ್ಧಾರವು ತಾರತಮ್ಯದಿಂದ ಕೂಡಿದೆ ಎಂದು ಹೇಳಿದ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು,ಅದನ್ನು ರಾಜ್ಯ ಸರಕಾರಗಳು ಸರ್ವಾನುಮತದಿಂದ ತಿರಸ್ಕರಿಸಬೇಕು. ತಯಾರಕರೊಂದಿಗೆ ಏಕರೂಪ ದರವನ್ನು ನಿಗದಿಗೊಳಿಸಲು ರಾಜ್ಯ ಸರಕಾರಗಳು ಜಂಟಿಯಾಗಿ ಬೆಲೆ ಸಂಧಾನ ಸಮಿತಿಯೊಂದನ್ನು ರಚಿಸಬೇಕು ಎಂದು ಸಲಹೆ ನೀಡಿದರು. ಕೇಂದ್ರವು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಮತ್ತು ಕಾರ್ಪೊರೇಟ್ ಲಾಭಬಡುಕತನಕ್ಕೆ ಶರಣಾಗುತ್ತಿದೆ ಎಂದು ಅವರು ಆರೋಪಿಸಿದರು.
ಸರಕಾರದ ನಿರ್ಧಾರವು ಅತ್ಯಂತ ವಿಲಕ್ಷಣವಾಗಿದೆ ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ಹಾಗೂ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು,ಇದು ಲಸಿಕೆಯ ಅಕ್ರಮ ದಾಸ್ತಾನಿಗೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದರು. ಒಂದೇ ಲಸಿಕೆಗೆ ಕೇಂದ್ರಕ್ಕೆ 150 ರೂ.,ರಾಜ್ಯ ಸರಕಾರಗಳಿಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.;ಹೀಗೆ ಮೂರು ವಿಭಿನ್ನ ದರಗಳನ್ನು ನಿಗದಿಗೊಳಿಸಿರುವ ಸಕಾರದ ನಿರ್ಧಾರವು ಜನರನ್ನು ಹೆಚ್ಚಿನ ಸಂಕಷ್ಟಕ್ಕೆ ತಳ್ಳಿದೆ. ಅಕ್ರಮ ದಾಸ್ತಾನು ಮತ್ತು ಕಾಳಸಂತೆಯಲ್ಲಿ ಮಾರಾಟವನ್ನು ತಡೆಯಲು ‘ಒಂದು ದೇಶ ಒಂದು ಲಸಿಕೆ ಒಂದು ದರ ’ ನೀತಿಯ ಅಗತ್ಯವಿದೆ ಎಂದರು.
ಈ ಹಿಂದೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ಒದಗಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದರು.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕೋವಿಡ್-19 ಲಸಿಕೆಯನ್ನು ಒದಗಿಸುವುದಾಗಿ ಮಧ್ಯಪ್ರದೇಶ,ಕೇರಳ,ಛತ್ತೀಸ್ಗಡ,ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ಅಸ್ಸಾಂ, ಜಾರ್ಖಂಡ್, ಪಂಜಾಬ್,ಹಿಮಾಚಲ ಪ್ರದೇಶ ಮತ್ತು ಗೋವಾ ರಾಜ್ಯಗಳು ಈಗಾಗಲೇ ಪ್ರಕಟಿಸಿವೆ.







