ಕೋವಿಡ್ ಪ್ರಕರಣಗಳಲ್ಲಿ ಭಾರೀ ಹೆಚ್ಚಳ: ಭಾರತಕ್ಕೆ ಪ್ರಯಾಣಿಸದಂತೆ ನಾಗರಿಕರಿಗೆ ಅಮೆರಿಕ ಸೂಚನೆ

ಸಾಂದರ್ಭಿಕ ಚಿತ್ರ
ವಾಶಿಂಗ್ಟನ್, ಎ. 23: ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಅಗಾಧ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಮಾಲ್ದೀವ್ಸ್ಗೆ ಪ್ರಯಾಣಿಸದಂತೆ ಅಮೆರಿಕವು ತನ್ನ ನಾಗರಿಕರಿಗೆ ಸಲಹೆ ನೀಡಿದೆ.
ಅದೇ ವೇಳೆ, ಚೀನಾ ಮತ್ತು ನೇಪಾಳ ಪ್ರವಾಸವನ್ನು ಮರುಪರಿಶೀಲಿಸುವಂತೆ, ಶ್ರೀಲಂಕಾ ಪ್ರವಾಸದ ವೇಳೆ ಹೆಚ್ಚು ಜಾಗರೂಕವಾಗಿರುವಂತೆ ಹಾಗೂ ಭೂತಾನ್ ಪ್ರವಾಸದ ವೇಳೆ ಸಾಮಾನ್ಯ ಪ್ರಯಾಣ ಎಚ್ಚರಿಕೆಗಳನ್ನು ಪಾಲಿಸುವಂತೆ ಅಮೆರಿಕದ ಅಧಿಕಾರಿಗಳು ಅಮೆರಿಕನ್ನರನ್ನು ಒತ್ತಾಯಿಸಿದ್ದಾರೆ.
ಅವೆುರಿಕದ ಅಧಿಕಾರಿಗಳು ಈ ಸಂಬಂಧ ಗುರುವಾರ ಹಲವಾರು ಪ್ರವಾಸಿ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದಾರೆ.
ಕೊರೋನ ವೈರಸ್ ಸಾಂಕ್ರಾಮಿಕದ ತೀವ್ರತೆಯಲ್ಲಿ ಭೂತಾನ್ 1ನೇ ಹಂತದಲ್ಲಿದೆ. ಇದು ಅತ್ಯಂತ ಸುರಕ್ಷಿತ ಹಂತವಾಗಿದೆ.
ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಮಾಲ್ದೀವ್ಸ್ ನಾಲ್ಕನೇ ಹಂತದಲ್ಲಿವೆ. ಇದು ಪರಿಸ್ಥಿತಿ ಬಿಗಡಾಯಿಸಿದ ಹಂತವಾಗಿದೆ.
‘‘ಕೋವಿಡ್-19, ಅಪರಾಧ ಮತ್ತು ಭಯೋತ್ಪಾದನೆ ಹಿನ್ನೆಲೆಯಲ್ಲಿ ಭಾರತಕ್ಕೆ ಪ್ರಯಾಣಿಸಬೇಡಿ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯು ಭಾರತಕ್ಕೆ ಸಂಬಂಧಿಸಿದ ತನ್ನ ನೂತನ ಮಾರ್ಗದರ್ಶಿ ಸೂಚಿಯಲ್ಲಿ ಹೇಳಿದೆ.







