ಉಡುಪಿ: 282 ಮಂದಿಗೆ ಕೊರೋನ ಸೋಂಕು
ಉಡುಪಿ, ಎ.23: ಶುಕ್ರವಾರ ಜಿಲ್ಲೆಯ 282 ಮಂದಿಯಲ್ಲಿ ಕೊರೋನ ಸೋಂಕು ಕಂಡುಬಂದಿದೆ. ದಿನದಲ್ಲಿ 182 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆಯೂ ಇದೀಗ 1265ಕ್ಕೆ ಏರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ 282 ಮಂದಿಯಲ್ಲಿ 155 ಮಂದಿ ಪುರುಷರಾದರೆ, 127 ಮಂದಿ ಮಹಿಳೆಯರು. ಇವರಲ್ಲಿ 143 ಮಂದಿ ಉಡುಪಿ ತಾಲೂಕಿನವರಾದರೆ, 108 ಮಂದಿ ಕುಂದಾಪುರ ಹಾಗೂ 27 ಮಂದಿ ಕಾರ್ಕಳ ತಾಲೂಕಿನವರು. ಹೊರಜಿಲ್ಲೆಯಿಂದ ಚಿಕಿತ್ಸೆಗೆಂದು ಬಂದ ನಾಲ್ವರು ಸಹ ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಗುರುವಾರ 182 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 26,580ಕ್ಕೇರಿದೆ. ನಿನ್ನೆ ಜಿಲ್ಲೆಯ 2756 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 282 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 28,039 ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,81,570 ಮಂದಿಯನ್ನು ಕೋವಿಡ್ ಪರೀಕ್ಷೆ ಗೊಳಪಡಿಸಲಾಗಿದೆ. ಇಂದು ಅಧಿಕೃತವಾಗಿ ಕೊರೋನಕ್ಕೆ ಯಾರೂ ಬಲಿಯಾಗಿಲ್ಲ. ಈವರೆಗೆ ಕೊರೋನದಿಂದ ಮೃತಪಟ್ಟವರ ಸಂಖ್ಯೆ194 ಆಗಿದೆ.







