ಸಾವಿನ ಪ್ರವಾಹ ಎದುರಿಸುತ್ತಿರುವ ದಿಲ್ಲಿಯಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ
ತಾಯಿಯ ಮೃತದೇಹ ಎರಡು ದಿನ ಮನೆಯಲ್ಲೇ ಇಟ್ಟುಕೊಂಡಿದ್ದ ದಿಲ್ಲಿ ನಿವಾಸಿ ನಿತೀಶ್

ಹೊಸದಿಲ್ಲಿ: ದಿಲ್ಲಿ ನಿವಾಸಿ ನಿತೀಶ್ ಕುಮಾರ್ ಅವರು ನಗರದ ಸ್ಮಶಾನಗಳಲ್ಲಿ ಮೃತ ತಾಯಿಯ ಅಂತ್ಯಕ್ರಿಯೆ ನಡೆಸಲು ಸ್ಥಳ ಸಿಗದೆ ತಾಯಿಯ ಶವವನ್ನು ಎರಡು ದಿನ ಮನೆಯಲ್ಲಿಯೇ ಇಟ್ಟುಕೊಳ್ಳಬೇಕಾಯಿತು. ಇದು ರಾಷ್ಟ್ರ ರಾಜಧಾನಿಯಲ್ಲಿ ಕೊರೋನ ಪ್ರಕರಣ ಹೆಚ್ಚಳದಿಂದ ಉಂಟಾಗಿರುವ ಸಾವಿನ ಪ್ರವಾಹದ ಸಂಕೇತವಾಗಿದೆ.
ಗುರುವಾರ, ಕುಮಾರ್ ಅವರು ಈಶಾನ್ಯ ದಿಲ್ಲಿಯ ಸೀಮಾಪುರಿಯಲ್ಲಿರುವ ಶವಾಗಾರದ ಪಕ್ಕದ ಪಾರ್ಕಿಂಗ್ ಸ್ಥಳದಲ್ಲಿ ತಾತ್ಕಾಲಿಕ ಸಾಮೂಹಿಕ ಶವಸಂಸ್ಕಾರ ಸೌಲಭ್ಯದಲ್ಲಿ ಕೋವಿಡ್-19 ನಿಂದ ನಿಧನರಾದ ತಮ್ಮ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದರು.
ಕಳೆದ 24 ಗಂಟೆಗಳಲ್ಲಿ ದಿಲ್ಲಿಯಲ್ಲಿ ಕೋವಿಡ್-19 ನಿಂದ 306 ಜನರು ಸಾವನ್ನಪ್ಪಿದ್ದು, ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಜನರು ತಾತ್ಕಾಲಿಕ ಸೌಲಭ್ಯಗಳತ್ತ ಮುಖ ಮಾಡುತ್ತಿದ್ದಾರೆ, ಸ್ಮಶಾನಗಳು ಒತ್ತಡಕ್ಕೆ ಸಿಲುಕಿದ್ದು ಸಾಮೂಹಿಕ ಸಮಾಧಿ ಹಾಗೂ ಸಾಮೂಹಿಕ ಶವಸಂಸ್ಕಾರಗಳನ್ನು ಕೈಗೊಳ್ಳುತ್ತಿವೆ.
ಗುರುವಾರ ಮಧ್ಯಾಹ್ನದ ಹೊತ್ತಿಗೆ 60 ಶವಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ತಾತ್ಕಾಲಿಕ ಸೌಲಭ್ಯದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಹಾಗೂ ಇನ್ನೂ 15 ಮಂದಿ ಕಾಯುತ್ತಿದ್ದಾರೆ ಎಂದು ಸರಕಾರೇತರ ಸಂಸ್ಥೆಯನ್ನು ನಡೆಸುತ್ತಿರುವ ಶಹೀದ್ ಭಗತ್ ಸಿಂಗ್ ಸೇವಾ ದಳದ ಜಿತೇಂದರ್ ಸಿಂಗ್ ಹೇಳಿದರು.
"ದಿಲ್ಲಿಯಲ್ಲಿರುವ ಯಾರೂ ಇಂತಹ ದೃಶ್ಯಕ್ಕೆ ಸಾಕ್ಷಿಯಾಗಿರಲಿಕ್ಕಿಲ್ಲ. 5 ವರ್ಷ, 15 ವರ್ಷ, 25 ವರ್ಷ ವಯಸ್ಸಿನ ಮಕ್ಕಳನ್ನು ಅಂತ್ಯಕ್ರಿಯೆ ಮಾಡಲಾಗುತ್ತಿದೆ. ನವವಿವಾಹಿತರನ್ನು ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ನೋಡುವುದು ಕಷ್ಟ" ಎಂದು ಜಿತೇಂದರ್ ಸಿಂಗ್ ಕಣ್ಣೀರಿಟ್ಟರು.
ಕಳೆದ ವರ್ಷ ಕೊರೋನದ ಮೊದಲ ಅಲೆ ಉತ್ತುಂಗದಲ್ಲಿದ್ದಾಗ ನಾನು ಒಂದೇ ದಿನದಲ್ಲಿ ಶವಸಂಸ್ಕಾರ ಮಾಡಲು ಸಹಾಯ ಮಾಡಿದ ಗರಿಷ್ಟ ಮೃತದೇಹಗಳು 18 ಆಗಿದ್ದು , ದಿನಕ್ಕೆ ಸರಾಸರಿ ಎಂಟರಿಂದ 10 ರಷ್ಟಿತ್ತು ಎಂದು ಹೇಳಿದರು.