ಕೇಂದ್ರದಿಂದ ಪರಿಷ್ಕೃತ ಕೋವಿಡ್-19 ಚಿಕಿತ್ಸಾ ಮಾರ್ಗಸೂಚಿಗಳ ಬಿಡುಗಡೆ
ಉಸಿರಾಟವನ್ನು ಉತ್ತಮಗೊಳಿಸಲು ಇಲ್ಲಿದೆ ತಂತ್ರ

ಹೊಸದಿಲ್ಲಿ,ಎ.23: ಭಾರತದಲ್ಲಿ ಕೊರೋನ ವೈರಸ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್-19 ರೋಗಿಗಳಿಗಾಗಿ ಪರಿಷ್ಕೃತ ಕ್ಲಿನಿಕಲ್ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಮಧ್ಯಮದಿಂದ ತೀವ್ರ ಲಕ್ಷಣಗಳಿರುವ ರೋಗಿಗಳಿಗೆ ರೆಮ್ಡೆಸಿವಿರ್ ಮತ್ತು ತೀವ್ರ ಲಕ್ಷಣಗಳಿರುವವರಿಗೆ ಐಸಿಯು ಘಟಕದಲ್ಲಿ ದಾಖಲಾದ 24ರಿಂದ 48 ಗಂಟೆಗಳಲ್ಲಿ ಟೋಸಿಲಿಜುಮಾಬ್ ಬಳಕೆಯನ್ನು ಅದು ಶಿಫಾರಸು ಮಾಡಿದೆ.
ಮನೆಯಲ್ಲಿದ್ದುಕೊಂಡು ಉಸಿರಾಟ ಸಮಸ್ಯೆಯನ್ನು ಎದುರಿಸುತ್ತಿರುವ ರೋಗಿಗಳಿಗೆ ನೆರವಾಗಲು ‘ಪ್ರೋನಿಂಗ್’ ತಂತ್ರದ ಬಗ್ಗೆ ವಿವರಗಳನ್ನು ಸಚಿವಾಲಯವು ಪ್ರತ್ಯೇಕವಾಗಿ ನೀಡಿದೆ. ಬೆನ್ನಿನ ಮೇಲೆ ಮಲಗಿರುವ ರೋಗಿಗಳನ್ನು ನಿಖರ ಮತ್ತು ಸುರಕ್ಷಿತ ಚಲನೆಗಳ ಮೂಲಕ ಬೋರಲಾಗಿ ಮಲಗಿಸುವುದನ್ನು ಈ ತಂತ್ರವು ಒಳಗೊಂಡಿದೆ. ಇದರಿಂದ ಉಸಿರಾಟ ಸುಗಮಗೊಳ್ಳುತ್ತದೆ ಮತ್ತು ಶ್ವಾಸಕೋಶಗಳಿಗೆ ಹೆಚ್ಚಿನ ಆಮ್ಲಜನಕವು ತಲುಪುತ್ತದೆ.
ಗರ್ಭಿಣಿಯರು,ಆಳ ಅಭಿಧಮನಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿರುವವರು,ಗಂಭೀರ ಹೃದ್ರೋಗಗಳು, ಬೆನ್ನುಮೂಳೆ ಸಮಸ್ಯೆ,ತೊಡೆಮೂಳೆ ಮುರಿತ,ಬಿರುಕು ಇರುವವರು ಪ್ರೋನಿಂಗ್ ವಿಧಾನವನ್ನು ಅನುಸರಿಸಬಾರದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಪರಿಷ್ಕೃತ ಮಾರ್ಗಸೂಚಿಗಳು ಲಕ್ಷಣಗಳ ತೀವ್ರತೆಗೆ ಅನುಗುಣವಾಗಿ ಚಿಕಿತ್ಸಾ ವಿಧಾನಗಳನ್ನು ಸೂಚಿಸಿವೆ.
ರೋಗಿಯ ಉಸಿರಾಟ ದರವು ಪ್ರತಿ ನಿಮಿಷಕ್ಕೆ 30ಕ್ಕಿಂತ ಹೆಚ್ಚಿರುವ ಅಥವಾ ಅವರ ಶರೀರದಲ್ಲಿ ಆಮ್ಲಜನಕದ ಮಟ್ಟ ಕೋಣೆಯಲ್ಲಿನ ಗಾಳಿಯ ಶೇ.90ಕ್ಕಿಂತ ಕಡಿಮೆಯಿರುವ ತೀವ್ರ ಪ್ರಕರಣಗಳಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಬೇಕು ಎಂದು ತಿಳಿಸಿರುವ ಮಾರ್ಗಸೂಚಿಗಳು, ಮಧ್ಯಮ ಸ್ವರೂಪದ ಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ವಾರ್ಡ್ಗಳಿಗೆ ದಾಖಲಿಸುವಂತೆ ಶಿಫಾರಸು ಮಾಡಿವೆ.
ಲಕ್ಷಣಗಳು ಕಾಣಿಸಿಕೊಂಡ ಏಳು ದಿನಗಳೊಳಗೆ, ರೋಗವು ಆರಂಭಿಕ ಹಂತದಲ್ಲಿದ್ದರೆ ಮಾತ್ರ ಪ್ಲಾಸ್ಮಾ ಥೆರಪಿಯನ್ನು ಬಳಸಬಹುದು ಎಂದು ಅದು ತಿಳಿಸಿದೆ. ಮೂತ್ರಪಿಂಡ ಅಥವಾ ಯಕೃತ್ತಿನ ತೀವ್ರ ಸಮಸ್ಯೆಯಿರುವ ರೋಗಿಗಳು ರೆಮ್ಡೆಸಿವಿರ್ ತೆಗೆದುಕೊಳ್ಳಬಾರದು. ಆಮ್ಲಜನಕ ಯಂತ್ರವನ್ನು ಅಳವಡಿಸಿರದ ಅಥವಾ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗಾಗಿ ಅದನ್ನು ಬಳಸಬಾರದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸೌಮ್ಯ ರೋಗಲಕ್ಷಣಗಳೊಂದಿಗೆ ಮನೆಯಲ್ಲಿ ಪ್ರತ್ಯೇಕವಾಗಿರುವವವರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಮತ್ತು ಕೈಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಲಕ್ಷಣಗಳಿರುವ ರೋಗಿಗಳು ತಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು ಮತ್ತು ಶರೀರದ ಉಷ್ಣತೆ ಹಾಗೂ ಆಮ್ಲಜನಕ ಮಟ್ಟದ ಮೇಲೆ ನಿಗಾಯಿರಿಸಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಉಸಿರಾಟಕ್ಕೆ ತೊಂದರೆ, ತೀವ್ರ ಜ್ವರ, ತೀವ್ರ ಕೆಮ್ಮು, ವಿಶೇಷವಾಗಿ ಐದು ದಿನಗಳಿಗೂ ಹೆಚ್ಚು ಮುಂದುವರಿದರೆ ತಕ್ಷಣ ವೈದ್ಯಕೀಯ ನೆರವನ್ನು ಪಡೆದುಕೊಳ್ಳುವಂತೆ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.







