ಅಸ್ಸಾಂ: ಮನೆಗೆಲಸದ ಬಾಲಕಿಗೆ ಬೆಂಕಿ ಹಚ್ಚಿ ಹತ್ಯೆ; ಇಬ್ಬರ ಬಂಧನ

ಗುವಾಹಟಿ, ಎ.23: ಮನೆಗೆಲಸಕ್ಕಿದ್ದ 12 ವರ್ಷದ ಬಾಲಕಿಗೆ ಬೆಂಕಿ ಹಚ್ಚಿ ಹತ್ಯೆಗೈದ ಪ್ರಕರಣ ಅಸ್ಸಾಂನ ನಗಾಂವ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆ ಕೆಲಸಕ್ಕಿದ್ದ ಮನೆಯವರು ಮಾಹಿತಿ ನೀಡಿದ್ದರು. ಆದರೆ ಸಂಶಯದ ಮೇಲೆ ಮನೆಯವರನ್ನು ವಿಚಾರಣೆ ನಡೆಸಿದಾಗ ಬಾಲಕಿಗೆ ಬೆಂಕಿ ಹಚ್ಚಿರುವುದು ಬೆಳಕಿಗೆ ಬಂದಿದೆ.
ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಬಾಲಕಿ ನೆಲಕ್ಕೆ ತಲೆಯೊರಗಿಸಿ ಮಂಡಿಯೂರಿ ಕುಳಿತ ಸ್ಥಿತಿಯಲ್ಲಿದ್ದಾಳೆ. ಒಂದು ಪ್ಲಾಸ್ಟಿಕ್ ಜಾರ್ ಹಾಗೂ ಬೆಂಕಿಪೆಟ್ಟಿಗೆಯೂ ಚಿತ್ರದಲ್ಲಿ ಕಾಣಿಸುತ್ತಿದೆ. ಬಾಲಕಿ ಮನೆಗೆ ಹೋಗುವುದಾಗಿ ವಿನಂತಿಸಿದಾಗ ಮನೆಯವರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಸಾಧ್ಯತೆಯಿದೆ. ಪ್ರಕರಣಕ್ಕೆ ಸಂಬಂಧಿಸಿ ಪ್ರಕಾಶ್ ಬೋರ್ಥಕುರ್ ಮತ್ತವರ ಪುತ್ರ ನಯನ್ಮೋನಿ ಬೋರ್ಥಕುರ್ರನ್ನು ಬಂಧಿಸಿ ಮತ್ತಷ್ಟು ವಿಚಾರಣೆ ನಡೆಸಲಾಗುತ್ತಿದೆ.
12 ವರ್ಷದ ಬಾಲಕಿ ಕಳೆದ 5 ವರ್ಷದಿಂದ ಆ ಮನೆಯಲ್ಲಿ ಕೆಲಸ ಮಾಡುತ್ತಿದ್ದು 14 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಯನ್ನು ಹತ್ಯೆಗೈದು ಬಳಿಕ ಸುಟ್ಟು ಹಾಕಿರುವ ಸಾಧ್ಯತೆಯಿದೆ ಎಂದು ಅಸ್ಸಾಂ ಪೊಲೀಸ್ ಮುಖ್ಯಸ್ಥ ಭಾಸ್ಕರ ಜ್ಯೋತಿ ಮಹಾಂತ ಟ್ವೀಟ್ ಮಾಡಿದ್ದಾರೆ.





