"ವೃದ್ಧರನ್ನು ಸಾಯಲು ಬಿಡಲಾಗದು": ಮನೆಯಲ್ಲಿ ಲಸಿಕೆ ನೀಡುವ ಬಗ್ಗೆ ಪರಿಶೀಲಿಸಲು ಕೇಂದ್ರಕ್ಕೆ ಹೈಕೋರ್ಟ್ ಸಲಹೆ

ಮುಂಬೈ, ಎ.23: ಲಸಿಕೆ ಪಡೆಯಲು ಕೋವಿಡ್ ಲಸಿಕಾ ಕೇಂದ್ರಕ್ಕೆ ಬರಲಾಗದ ಕಾರಣಕ್ಕೆ ವೃದ್ಧರನ್ನು ಸಾಯಲು ಬಿಡಲಾಗದು ಎಂದು ಹೇಳಿರುವ ಬಾಂಬೆ ಹೈಕೋರ್ಟ್, ಮನೆಯಲ್ಲಿ ಲಸಿಕೆ ಅಭಿಯಾನ ಸಾಧ್ಯವಿಲ್ಲ ಎಂಬ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.
ಹಿರಿಯ ನಾಗರಿಕರು, ಅಂಗವೈಕಲ್ಯ ಇರುವವರು ಹಾಗೂ ಮುಪ್ಪು ಅಥವಾ ಅಸ್ವಾಸ್ಥದಿಂದ ಹಾಸಿಗೆ ಹಿಡಿದಿರುವವರ ಒಳಿತಿಗಾಗಿ ಮನೆ ಮನೆಯಲ್ಲಿ ಲಸಿಕೆ ಅಭಿಯಾನ ಆರಂಭಿಸಲು ಕೇಂದ್ರ ಸರಕಾರಕ್ಕೆ ಸೂಚಿಸುವಂತೆ ಕೋರಿ ನ್ಯಾಯವಾದಿಗಳಾದ ಧೃತಿ ಕಪಾಡಿಯಾ ಮತ್ತು ಕುಣಾಲ್ ತಿವಾರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಹೈಕೋರ್ಟ್ ಈ ಸಲಹೆ ನೀಡಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರ ಸಲ್ಲಿಸಿರುವ ಅಫಿದಾವಿತ್ನಲ್ಲಿ ಮನೆ ಮನೆಯಲ್ಲಿ ಲಸಿಕೆ ಅಭಿಯಾನ ಆರಂಭಿಸಲು ಯಾಕೆ ಸಾಧ್ಯವಿಲ್ಲ ಎಂಬ ಬಗ್ಗೆ ವಿವರಿಸಲಾಗಿದೆ. ಮನೆ ಮನೆ ಅಭಿಯಾನದ ಸಂದರ್ಭ ಲಸಿಕೆ ಕಲುಷಿತಗೊಳ್ಳುವ ಸಾಧ್ಯತೆಯಿದೆ.
ಅಲ್ಲದೆ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆಯೇ ಎಂದು 30 ನಿಮಿಷ ನಿಗಾ ವಹಿಸಲು ಸಾಧ್ಯವಿದೆ. ಆದರೆ ಮನೆ ಮನೆ ಲಸಿಕೆ ಅಭಿಯಾನದಲ್ಲಿ ಇದು ಕಷ್ಟಸಾಧ್ಯ. ಅಲ್ಲದೆ ಲಸಿಕೆ ದಾಸ್ತಾನು ಸಮಸ್ಯೆಯೂ ಎದುರಾಗಲಿದೆ ಎಂದು ಕೇಂದ್ರ ಸರಕಾರದ ಪರ ವಕೀಲರು ಹೇಳಿದರು. ಇದರಿಂದ ತೃಪ್ತರಾಗದ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿಎಸ್ ಕುಲಕರ್ಣಿ ಅವರಿದ್ದ ನ್ಯಾಯಪೀಠ, ಇದಕ್ಕೊಂದು ಪರಿಹಾರ ದೊರಕಬೇಕಿದೆ. ವೃದ್ಧರನ್ನು ಈ ರೀತಿ ಬಿಟ್ಟುಬಿಡಲು ಸಾಧ್ಯವಿಲ್ಲ. ಭೂತ ಮತ್ತು ಆಳ ಸಮುದ್ರ - ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ ಎಂದು ಹೇಳಿದಂತಾಯಿತು. ಮನೆ ಮನೆ ಲಸಿಕೆ ಅಭಿಯಾನದಲ್ಲಿ ಐಸಿಯು , ರೆಫ್ರಿಜರೇಟರ್ವ್ಯವಸ್ಥೆಯಿರುವ ಆ್ಯಂಬುಲೆನ್ಸ್ ಒದಗಿಸಬಹುದು ಎಂದು ಹೇಳಿತು.
‘ನಿಮ್ಮಿಂದ ಇನ್ನಷ್ಟು ಉತ್ತಮ ಅಫಿದಾವಿತ್ ನಿರೀಕ್ಷಿಸಿದ್ದೆವು. ನನ್ನ ತಾಯಿ ತಮ್ಮ ಅಂತಿಮ 6 ವರ್ಷ ಹಾಸಿಗೆಯಲ್ಲೇ ಇದ್ದರು. ಅವರು ಕೊರೋನದ ಸಂದರ್ಭದಲ್ಲಿ ಜೀವಿಸಿದ್ದರೆ ಅವರು ಏನು ಮಾಡುತ್ತಿದ್ದರು? ವೃದ್ಧರನ್ನು ಸಾಯಲು ಬಿಡಲಾಗದು’ ಎಂದು ಮುಖ್ಯ ನ್ಯಾಯಮೂರ್ತಿ ದತ್ತಾ ಹೇಳಿದರು. ವೃದ್ಧರು, ಸಹ ಅಸ್ವಸ್ಥತೆ ಇರುವವರು ಕೊರೋನ ಲಸಿಕಾ ಕೇಂದ್ರಕ್ಕೆ ಬಂದರೆ ಇನ್ನೂ ಹೆಚ್ಚು ಅಪಾಯ ಎದುರಿಸಬೇಕಾಗಬಹುದು ಎಂದು ಆತಂಕ ಸೂಚಿಸಿದ ಹೈಕೋರ್ಟ್, ಮನೆ ಮನೆ ಲಸಿಕೆ ಅಭಿಯಾನದ ಬಗ್ಗೆ ನಿರ್ಧರಿಸಲು 2 ವಾರಗಳ ಕಾಲಾವಕಾಶ ನೀಡಿತು.