ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ: ಹಲವು ಕಡೆ ಧರೆಗುರುಳಿದ ಮರಗಳು

ಬೆಂಗಳೂರು, ಎ.23: ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ಧಾರವಾಡ, ರಾಯಚೂರು, ಯಾದಗಿರಿ, ಬಾಗಲಕೋಟ, ಬೀದರ್, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಕರಾವಳಿ ಪ್ರದೇಶ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯಿತು.
ಬೆಂಗಳೂರಿನಲ್ಲಿ ಮಳೆ: ಮೆಜೆಸ್ಟಿಕ್, ಶಿವಾನಂದ ವೃತ್ತ, ಮಲ್ಲೇಶ್ವರಂ, ಮೇಖ್ರಿ ವೃತ್ತ, ಯಶವಂತಪುರ, ಶಿವಾಜಿನಗರ, ಕೆ.ಆರ್.ಮಾರುಕಟ್ಟೆ, ಹೆಬ್ಬಾಳ, ವಿಜಯನಗರ, ಸಿಂಗನಾಯಕನಹಳ್ಳಿ, ರಾಜಾನುಕುಂಟೆ, ವಿ.ನಾಗೇನಹಳ್ಳಿ, ಕೆ.ಜಿ.ಹಳ್ಳಿ, ಯಲಹಂಕ, ಎಚ್.ಗೊಲ್ಲಹಳ್ಳಿ, ವಡೇರಹಳ್ಳಿ, ದಯಾನಂದನಗರ, ಶಿವಕೋಟೆ, ಮಂಡೂರು, ಅಟ್ಟೂರು, ಮನೋರಾಯನಪಾಳ್ಯ, ಹೆಮ್ಮಿಗೆಪುರ, ನಾಗಪುರ, ವಿದ್ಯಾರಣ್ಯಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು.
ಮಳೆ ಹಿನ್ನೆಲೆಯಲ್ಲಿ ಹಲವು ಕಡೆ ಮರಗಳು ಧರೆಗುರುಳಿದರೆ, ಇನ್ನೂ ಕೆಲವು ಮೇಲುಸೇತುವೆ ಕೆಳಕಡೆ ಮಳೆ ನೀರು ನಿಂತ ಪರಿಣಾಮ ವಾಹನ ಸವಾರರಿಗೆ ಅಡ್ಡಿವುಂಟಾಯಿತು.
ಎ.26ವರೆಗೂ ಇದೇ ರೀತಿ ವಾತಾವರಣ ಮುಂದುವರಿಯಲಿದೆ. ಆಗಾಗ್ಗೆ ಮೋಡ ಕವಿದ ವಾತಾವರಣ ಮತ್ತು ಜಿಟಿ ಜಿಟಿ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.





