ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಮುಂಬೈ ಪೊಲೀಸ್ ಅಧಿಕಾರಿ ಸುನಿಲ್ ಮಾನೆ ಬಂಧನ

ಮುಂಬೈ, ಎ.23: ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ, ಮುಂಬೈ ಪೊಲೀಸ್ ಅಧಿಕಾರಿ ಸುನಿಲ್ ಮಾನೆಯನ್ನು ಶುಕ್ರವಾರ ಬಂಧಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪೊಲೀಸರನ್ನು ಬಂಧಿಸಿದಂತಾಗಿದೆ.
ಈ ಹಿಂದೆ ಸಚಿನ್ ವಾಝೆ ಮತ್ತು ರಿಯಾಝ್ ಕಾಝಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಂಧಿಸಿತ್ತು. ಫೆಬ್ರವರಿ 25ರಂದು ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾಗಿತ್ತು. ಈ ಕಾರನ್ನು ಕೆಲ ದಿನದ ಹಿಂದೆ ಕದಿಯಲಾಗಿತ್ತು ಎಂದು ಕಾರಿನ ಮಾಲಕ, ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೇನ್ ದೂರು ನೀಡಿದ್ದರು.
ಮರುದಿನ ಹಿರೇನ್ ಮೃತದೇಹ ಥಾಣೆಯ ಹೆದ್ದಾರಿ ಬಳಿಯ ಚರಂಡಿಯಲ್ಲಿ ಪತ್ತೆಯಾಗಿತ್ತು. ತಾನೇ ಅಪರಾಧಿ ಎಂದು ಒಪ್ಪಿಕೊಂಡು ಪೊಲೀಸರಿಗೆ ಶರಣಾಗುವಂತೆ ತನ್ನ ಪತಿಗೆ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಒತ್ತಡ ಹೇರಿದ್ದರು ಎಂದು ಹಿರೇನ್ ಪತ್ನಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ವಾಝೆಯನ್ನು ಎನ್ಐಎ ಬಂಧಿಸಿತ್ತು. ಸಾಕ್ಷ ನಾಶ ಮಾಡಿದ ಆರೋಪದಲ್ಲಿ ವಾಝೆಯ ಸಹೋದ್ಯೋಗಿ ರಿಯಾಝ್ ಕಾಝಿಯನ್ನೂ ಬಂಧಿಸಲಾಗಿತ್ತು.