ಪತಂಜಲಿ ಮುಖ್ಯ ಕ್ಯಾಂಪಸ್ ನಲ್ಲಿ ಕೊರೋನ ಕೇಸ್ ಗಳಿಲ್ಲ, ಮಾಧ್ಯಮ ವರದಿ ಸುಳ್ಳು: ರಾಮದೇವ್

ಹರಿದ್ವಾರ: ಪತಂಜಲಿ ಯೋಗಪೀಠದ ಮುಖ್ಯ ಕ್ಯಾಂಪಸ್‌ನೊಳಗೆ ಕೊರೋನವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಧ್ಯಮಗಳ ವರದಿಯನ್ನು ಯೋಗ ಗುರು ರಾಮದೇವ್ ನಿರಾಕರಿಸಿದ್ದಾರೆ.
ಐಪಿಡಿಗೆ ಬಂದ ಹೊಸ ರೋಗಿಗಳು ಹಾಗೂ ಆಚಾರ್ಯಕುಲಂಗೆ ಬಂದಿದ್ದ ಹೊಸ ವಿದ್ಯಾರ್ಥಿಗಳನ್ನು ಶಿಷ್ಟಾಚಾರದ ಪ್ರಕಾರ ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳಿದರು. 14 ಸಂದರ್ಶಕರಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ. ಈ ರೋಗಿಗಳನ್ನು ಮುಖ್ಯ ಕ್ಯಾಂಪಸ್ ಒಳಗೆ ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದರು.
"ಪತಂಜಲಿಯಲ್ಲಿ ಯಾವುದೇ ವ್ಯಕ್ತಿ ಕೊರೋನ ವೈರಸ್ ಸೋಂಕಿಗೆ ಒಳಗಾಗಿಲ್ಲ. ಐಪಿಡಿಗೆ ಬಂದ ಹೊಸ ರೋಗಿಗಳು ಹಾಗೂ ಆಚಾರ್ಯಕುಲಂಗೆ ಪ್ರವೇಶಕ್ಕಾಗಿ ಬಂದಿದ್ದ ಹೊಸ ವಿದ್ಯಾರ್ಥಿಗಳನ್ನು ನಾವು ಕೋವಿಡ್ ಪ್ರೋಟೋಕಾಲ್ ಅಡಿಯಲ್ಲಿ ಪರೀಕ್ಷಿಸಿದ್ದೇವೆ. ಕೇವಲ 14 ಸಂದರ್ಶಕರು ಮಾತ್ರ ಪಾಸಿವಿಟ್ ಆಗಿದ್ದರು ಹಾಗೂ ಅವರನ್ನು ಮುಖ್ಯ ಕ್ಯಾಂಪಸ್ ಒಳಗೆ ಪ್ರವೇಶಿಸಲು ಅನುಮತಿಸಲಾಗಿಲ್ಲ. ಇದಲ್ಲದೆ, ಎಲ್ಲಾ ವರದಿಗಳು ಊಹಾಪೋಹವಾಗಿದ್ದು, ಸುಳ್ಳಿನ ಕಂತೆಯಾಗಿದೆ. ನಾನು ಪ್ರತಿದಿನ ಬೆಳಿಗ್ಗೆ 5 ರಿಂದ 10 ರವರೆಗೆ ಯೋಗ ಮತ್ತು ಆರೋಗ್ಯದ ನೇರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ "ಎಂದು ಅವರು ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.
ಪತಂಜಲಿ ಮುಖ್ಯ ಕ್ಯಾಂಪಸ್‌ನೊಳಗೆ 83 ಜನರಿಗೆ ಕೋವಿಡ್ ಸೋಂಕು ಕಂಡುಬಂದಿದೆ ಎಂದು ಕೆಲವು ಮಾಧ್ಯಮ ವರದಿ ಮಾಡಿದ್ದವು. ಪತಂಜಲಿ ವಕ್ತಾರ ಎಸ್.ಕೆ. ತಿಜರಾವಾಲಾ ಗುರುವಾರ ಈ ವರದಿಗಳನ್ನು ನಿರಾಕರಿಸಿದ್ದರು.





