ರೆಮ್‍ಡೆಸಿವಿರ್ ಇಂಜೆಕ್ಷನ್ ಆಕ್ರಮ ಮಾರಾಟ ಆರೋಪ: ಮೂವರ ಬಂಧನ

ಕಲಬುರಗಿ, ಎ.23: ಕೋವಿಡ್ ಸಂಬಂಧಿಸಿದ ರೆಮ್‍ಡೆಸಿವಿರ್ ಇಂಜೆಕ್ಷನ್ ಅಧಿಕ ಬೆಲೆಯಲ್ಲಿ ಆಕ್ರಮವಾಗಿ ಮಾರಾಟ ಮಾಡುತ್ತಿದ ಜಾಲವನ್ನು ಕಲಬುರಗಿ ರೌಡಿ ನಿಗ್ರಹ ತಂಡ ಕಾರ್ಯಾಚರಣೆ ನಡೆಸಿ ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ರೌಡಿ ನಿಗ್ರಹ ದಳದ ಪಿಎಸ್ಐ ವಾಹೀದ್ ಕೋತ್ವಾಲ, ಪಿಎಸ್ಐ ಹುಸೇನ್ ಬಾಷಾ, ಎಎಸ್ಐ ರಾಜಕುಮಾರ್, ಸಿಬ್ಬಂದಿ ತೌಸೀಫ್, ಶಿವಾನಂದ, ಈರಣ್ಣ, ರಾಜು ಫರತಾಬಾದ್ ರನ್ನು ಒಳಗೊಂಡ ತಂಡ ನಗರದ ಬಿಗ್ ಬಝಾರ್ ಹತ್ತಿರ ದಾಳಿ ನಡೆಸಿ, ಒಂದು ಇಂಜೆಕ್ಷನ್ 25 ಸಾವಿರಕ್ಕೆ ಮಾರಾಟ ಮಾಡುತ್ತಿದ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಡಯಾಗ್ನೋಸ್ಟಿಕ್ ಮತ್ತು ಎಕ್ಸ್ ರೆ ಟೆಕ್ನಿಷಿಯನ್ ಆಗಿರುವ ಜೇವರ್ಗಿ ತಾಲೂಕಿನ ಯಳಾವರಾ ಗ್ರಾಮದ ಭೀಮಾಶಂಕರ (27), ಮೆಡಿಕಲ್ ಕೆಲಸ ಮಾಡುವ ಅಫಜಲಪುರ ತಾಲೂಕಿನ ಅಂಕಲಗಾದ ನಿವಾಸಿ ಲಕ್ಷ್ಮಿಕಾಂತ (20) ಹಾಗೂ ಸ್ಟಾಫ್ ನರ್ಸ್ ಆಗಿರುವ ನಗರದ ಖಮರ್ ಕಾಲೋನಿಯ ನಿವಾಸಿ ಜಿಲಾನಿ ಖಾನ್ (32) ಬಂಧಿತ ಆರೋಪಿಗಳು.
ಇವರು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಇರುವ ತಮ್ಮ ಸಂಬಂಧಿಕರಿಂದ ಖಾಸಗಿ ಬಸ್ ಗಳ ಮೂಲಕ ರೆಮ್‍ಡೆಸಿವಿರ್ ಇಂಜೆಕ್ಷನ್ ತರಿಸಿಕೊಂಡು ನಗರದಲ್ಲಿ 25 ಸಾವಿರಕ್ಕೆ ಆಕ್ರಮವಾಗಿ ಮಾರಟ ಮಾಡುತ್ತಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನಗರದ ಬ್ರಹ್ಮಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







