"ಭಾರತದಲ್ಲಿ ಪ್ರಜಾಪ್ರಭುತ್ವ ಹದಗೆಡುತ್ತಿರುವುದನ್ನು ಭೀಮಾ ಕೋರೆಗಾಂವ್ ಪ್ರಕರಣ ತೋರಿಸುತ್ತಿದೆ"
ಅಮೆರಿಕ ಸಂಸತ್ ಗೆ ಮಾಹಿತಿ

ಮಾನವಹಕ್ಕು ಕಾರ್ಯಕರ್ತ ರೋನಾ ವಿಲ್ಸನ್
ಫೋಟೊ ಕೃಪೆ: twitter.com
ಹೊಸದಿಲ್ಲಿ, ಎ. 23: ಭಾರತದಲ್ಲಿ ಪ್ರಜಾಪ್ರಭುತ್ವವು ಹದಗೆಡುತ್ತಿದೆ ಎನ್ನುವುದಕ್ಕೆ ಭೀಮಾ-ಕೋರೆಗಾಂವ್ ಪ್ರಕರಣವು ನಿದರ್ಶನವಾಗಿದೆ ಎಂದು ಭಾರತೀಯ ಅಮೆರಿಕನ್ ಮತ್ತು ಮಾನವ ಹಕ್ಕುಗಳ ಸಂಘಟನೆಗಳ ಕೂಟವೊಂದು ಗುರುವಾರ ನಡೆದ ಅಮೆರಿಕ ಕಾಂಗ್ರೆಸ್ ಸಭೆಯ ಗಮನಕ್ಕೆ ತಂದಿದೆ.
ಭೀಮಾ ಕೋರೆಗಾಂವ ಪ್ರಕರಣದಲ್ಲಿ ಬಂಧಿತರಲ್ಲೋರ್ವರಾಗಿರುವ ಮಾನವಹಕ್ಕು ಕಾರ್ಯಕರ್ತ ರೋನಾ ವಿಲ್ಸನ್ ಅವರ ಲ್ಯಾಪ್ಟಾಪ್ ಹಾರ್ಡ್ಡಿಸ್ಕ್ ಪ್ರತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವ ಅಮೆರಿದ ಸ್ವತಂತ್ರ ವಿಧಿವಿಜ್ಞಾನ ಸಂಸ್ಥೆ ಆರ್ಸೆನೆಲ್ ಹ್ಯಾಕರ್ನೋರ್ವ ‘ನೆಟ್ವೈರ್’ ಎಂಬ ಮಾಲ್ವೇರ್ ಮೂಲಕ ಹಾರ್ಡ್ಡಿಸ್ಕ್ ನಲ್ಲಿ 22 ಹೆಚ್ಚುವರಿ ಆಕ್ಷೇಪಾರ್ಹ ಕಡತಗಳನ್ನು ಸೇರಿಸಿದ್ದ ಎಂದು ತನ್ನ ಹೊಸವರದಿಯಲ್ಲಿ ಬಹಿರಂಗಗೊಳಿಸಿದ ಬಳಿಕ ಈ ಸಭೆ ನಡೆದಿತ್ತು. ಮಾವೋವಾದಿ ಉಗ್ರರ ಸಭೆಗಳು, ಮಾವೋವಾದಿ ನಾಯಕರೊಂದಿಗೆ ಪತ್ರ ವ್ಯವಹಾರಗಳು ಮತ್ತು ಸಿಪಿಐ (ಮಾವೋವಾದಿ)ನಿಂದ ಪಡೆದ ಹಣದ ಮಾಹಿತಿ ಇತ್ಯಾದಿ ಕಪೋಲಕಲ್ಪಿತ ವಿಷಯಗಳಿದ್ದ ಈ ಕಡತಗಳು ರೋನಾ ವಿಲ್ಸನ್ ಎಂದೂ ಖುದ್ದಾಗಿ ಸೃಷ್ಟಿಸಿರದ, ತೆರೆಯದ, ಪರಿಷ್ಕರಿಸದ ಮತ್ತು ನೋಡಿಯೇ ಇರದಿದ್ದ ಪ್ರತ್ಯೇಕ ಫೋಲ್ಡರ್ನಲ್ಲಿದ್ದವು ಎಂದು ವರದಿಯು ಬೆಟ್ಟುಮಾಡಿದೆ.
ಸಂಸತ್ ಕಚೇರಿಗಳನ್ನು ಮತ್ತು ಮಾನವ ಹಕ್ಕುಗಳ ಸಂಘಟನೆಗಳನ್ನು ಪ್ರತಿನಿಧಿಸಿ 50ಕ್ಕೂ ಅಧಿಕ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ವಿಲ್ಸನ್ ಪರ ವಕೀಲರು 2019,ನವಂಬರ್ನಲ್ಲಿ ನ್ಯಾಯಾಲಯದ ಆದೇಶದಂತೆ ಪೊಲೀಸರಿಂದ ತಾನು ಪಡೆದುಕೊಂಡಿದ್ದ ಲ್ಯಾಪ್ಟಾಪ್ನ ವಿದ್ಯುನ್ಮಾನ ಪ್ರತಿಯನ್ನು ಆರ್ಸೆನೆಲ್ಗೆ ಸಲ್ಲಿಸಿ, ಅದನ್ನು ಪರೀಕ್ಷಿಸುವಂತೆ ಕೋರಿಕೊಂಡಿದ್ದರು. ಆರ್ಸೆನೆಲ್ ನಡೆಸಿದ್ದ ಹಿಂದಿನ ವಿಶ್ಲೇಷಣೆಯಲ್ಲಿ ವಿಲ್ಸನ್ ಅವರ ಲ್ಯಾಪ್ಟಾಪ್ನಲ್ಲಿ 10 ಪತ್ರಗಳನ್ನು ಸೇರಿಸಲಾಗಿದ್ದನ್ನು ಪತ್ತೆ ಹಚ್ಚಿತ್ತು. ವಿಲ್ಸನ್ ಅವರ ಕಂಪ್ಯೂಟರ್ನಿಂದ ಪಡೆಯಲಾದ ಈ ಪ್ಲಾಂಟ್ ಮಾಡಲಾಗಿದ್ದ ದಾಖಲೆಗಳ ಆಧಾರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಒಳಸಂಚು ರೂಪಿಸಲಾಗಿತ್ತು ಎಂದು ಆಪಾದಿಸಿದ್ದ ಪುಣೆ ಪೊಲೀಸರು ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಸಲ್ಲಿಸಿರುವ ದೋಷಾರೋಪಣ ಪಟ್ಟಿಯಲ್ಲಿ ಪ್ರಮುಖ ಸಾಕ್ಷವನ್ನಾಗಿ ಬಳಸಿದ್ದಾರೆ ಎಂದು ಆರ್ಸೆನೆಲ್ ವರದಿಯಲ್ಲಿ ತಿಳಿಸಿದೆ. ವಿಲ್ಸನ್ ಅವರ ಲ್ಯಾಪ್ಟಾಪ್ನಲ್ಲಿ ಈ ಕಡತಗಳನ್ನು ನುಸುಳಿಸಿರುವ ಹ್ಯಾಕರ್ ಕೃತ್ಯವನ್ನು ‘ಡಿಜಿಟಲ್ ವಿಧಿವಿಜ್ಞಾನದಲ್ಲಿ ಅತ್ಯಂತ ಗಂಭೀರ ಪ್ರಕರಣವಾಗಿದೆ’ಎಂದು ಆರ್ಸೆನೆಲ್ನ ಅಧ್ಯಕ್ಷ ಮಾರ್ಕ್ ಸ್ಪೆನ್ಸರ್ ಬಣ್ಣಿಸಿದ್ದಾರೆ.
ಭೀಮಾ-ಕೋರೆಗಾಂವ ಪ್ರಕರಣವು ಮಾನವ ಹಕ್ಕು ಕಾರ್ಯಕರ್ತರ ಧ್ವನಿಯನ್ನಡಗಿಸಲು ಅಧಿಕಾರದ ದುರುಪಯೋಗವನ್ನು ತೋರಿಸಿದೆ. ಪ್ರಕರಣದಲ್ಲಿ ಬಂಧಿತ ಪ್ರತಿಯೊಬ್ಬ ಆರೋಪಿಯೂ ಶೋಷಿತ ಮತ್ತು ಸುಲಭಭೇದ್ಯ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಶಾಂತಿಯುತ ಕಾರ್ಯಗಳಿಗಾಗಿ ಅವರನ್ನು ದಂಡಿಸಲಾಗುತ್ತಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮಾನವ ಹಕ್ಕು ಹೋರಾಟಗಾರರು ಹೇಳಿದರು.