ಸುಪ್ರೀಂಕೋರ್ಟ್, ಸಿಜೆಐ ವಿರುದ್ಧ ಹರಿಹಾಯ್ದ ನ್ಯಾಯವಾದಿ ದುಶ್ಯಂತ್ ದವೆ

ಹೊಸದಿಲ್ಲಿ, ಎ.23: ದೇಶದಲ್ಲಿರುವ ಕೊರೋನ ಪರಿಸ್ಥಿತಿಯ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ಮತ್ತು ಈ ವಿಷಯದಲ್ಲಿ ತನಗೆ ನೆರವಾಗಲು ಹಿರಿಯ ವಕೀಲ ಹರೀಶ್ ಸಾಳ್ವೆಯನ್ನು ನೇಮಿಸುವ ಸುಪ್ರೀಂಕೋರ್ಟ್ ಮತ್ತು ಮುಖ್ಯನ್ಯಾಯಾಧೀಶ ಎಸ್ಎ ಬೋಬ್ಡೆಯ ನಿರ್ಧಾರಕ್ಕೆ ಹಿರಿಯ ನ್ಯಾಯವಾದಿ ದುಶ್ಯಂತ್ ದವೆ ಆಕ್ಷೇಪ ಸೂಚಿಸಿದ್ದಾರೆ.
ಈ ಪ್ರಕರಣಗಳನ್ನು ತನ್ನ ಕೈಗೆ ತೆಗೆದಿಕೊಂಡಿರುವ ಸುಪ್ರೀಂಕೋರ್ಟ್ ನಡೆಗೆ ನನ್ನ ವಿರೋಧವಿದೆ. ಇಂತಹ ಪ್ರಕರಣಗಳ ಕಾರ್ಯಕಲಾಪ ಹೈಕೋರ್ಟ್ ಗಳಲ್ಲಿ ನಡೆಯುತ್ತಿರುವಾಗ ಸುಪ್ರೀಂಕೋರ್ಟ್ ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ದವೆ ಹೇಳಿದ್ದಾರೆ.
ಈ ವಿಷಯದ ಬಗ್ಗೆ ತುಂಬಾ ತಡವಾಗಿ ಸುಪ್ರೀಂಕೋರ್ಟ್ ಗಮನ ಹರಿಸಿದೆ ಮತ್ತು ಪ್ರಾಮುಖ್ಯ ವಿಷಯಗಳ ಬಗ್ಗೆ ವಿಚಾರಣೆ ನಡೆಸುತ್ತಿಲ್ಲ. ಸುಪ್ರೀಂಕೋರ್ಟ್ನ ಉದ್ದೇಶವೇನು? ಟಾಟಾ ಮತ್ತು ಸೈರಸ್ ಮಿಸ್ತ್ರಿ ನಡುವಿನ ಪ್ರಕರಣವನ್ನು ನೀವು ತಿಂಗಳುಗಟ್ಟಲೆ ನಿರ್ವಹಿಸಿ ಸಾಳ್ವೆ ವಾದಿಸಿದ್ದ ಟಾಟಾ ಸಂಸ್ಥೆಯ ಪರ ತೀರ್ಪು ಪ್ರಕಟಿಸಿದ್ದೀರಿ. 370ನೇ ವಿಧಿ, ಸಿಎಎ ಪ್ರಕರಣಗಳನ್ನು ನಿರ್ಧರಿಸಲು ನೀವು ಬಯಸುತ್ತಿಲ್ಲ. ಜೈಲಿನಲ್ಲಿ ಕೊಳೆಯುತ್ತಿರುವ ಸಾವಿರಾರು ನಾಗರಿಕರ ಜಾಮೀನು ಅರ್ಜಿಯ ವಿಚಾರಣೆಗೆ ನೀವು ಮುಂದಾಗುತ್ತಿಲ್ಲ. ಕೋವಿಡ್ ಪರಿಸ್ಥಿತಿ ನಿರ್ವಹಿಸಲು ಸರಕಾರದ ಸಿದ್ಧತೆಯ ಬಗ್ಗೆ ನಿರ್ಧರಿಸಲು ನೀವು ಬಯಸುತ್ತಿಲ್ಲ . ಈಗ ಕೊರೋನ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಗಂಭೀರ ಪ್ರಮಾದ ಎಸಗಿದ್ದೀರಿ ಎಂದು ದವೆ ಆಕ್ಷೇಪಿಸಿದ್ದಾರೆ. ಅಲ್ಲದೆ ಲಂಡನ್ನಲ್ಲಿ ನೆಲೆಸಿರುವ ಮತ್ತು ಭಾರತದ ಪರಿಸ್ಥಿತಿಯ ಬಗ್ಗೆ ತಿಳುವಳಿಕೆ ಇಲ್ಲದ ಹರೀಶ್ ಸಾಳ್ವೆಯನ್ನು ಆ್ಯಮಿಕಸ್ ಕ್ಯೂರಿಯಾಗಿ ನೇಮಿಸಿರುವುದನ್ನೂ ಅವರು ಪ್ರಶ್ನಿಸಿದ್ದಾರೆ.
ಸಾಳ್ವೆ ಮತ್ತು ಬೋಬ್ಡೆ ಒಟ್ಟಿಗೆ ಶಾಲೆಗೆ ಹೋದವರು. ಅವರಿಬ್ಬರೂ ಆತ್ಮೀಯ ಮಿತ್ರರು. ಪ್ರತೀ ಮೂರನೇ ಪ್ರಕರಣದಲ್ಲಿ ಸಾಳ್ವೆಯನ್ನು ಆ್ಯಮಿಕಸ್ ಕ್ಯೂರಿಯಾಗಿ ಬೋಬ್ಡೆ ನೇಮಿಸ್ತುತಿದ್ದಾರೆ. ಈ ದೇಶದಲ್ಲಿ ಇನ್ನೂ ಅತ್ಯುತ್ತಮ ನ್ಯಾಯವಾದಿಗಳಿದ್ದಾರೆ. ಸಾಳ್ವೆ ಅನಿವಾಸಿ ಭಾರತೀಯನಾಗಿದ್ದು ಅವರು ಭಾರತದಲ್ಲಿ ಈಗಿರುವ ಪರಿಸ್ಥಿತಿಗಿಂತ ವಿಭಿನ್ನ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ದವೆ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ, ನಮ್ಮ ಆದೇಶವನ್ನು ಓದದೆ ನೀವು ನಮ್ಮ ಮೇಲೆ ಆರೋಪಿಸುತ್ತಿದ್ದೀರಿ. ಸಾಳ್ವೆಯ ನೇಮಕದ ಬಗ್ಗೆ ಹಲವು ಹಿರಿಯ ನ್ಯಾಯವಾದಿಗಳ ಪ್ರತಿಕ್ರಿಯೆ ನಮಗೆ ನೋವು ತಂದಿದೆ. ಆ್ಯಮಿಕಸ್ ಕ್ಯೂರಿಯಾಗಿ ಸಾಳ್ವೆಯ ನೇಮಕ ನ್ಯಾಯಪೀಠದ ಎಲ್ಲಾ ನ್ಯಾಯಾಧೀಶರ ಸರ್ವಾನುಮತದ ನಿರ್ಧಾರವಾಗಿತ್ತು ಎಂದು ನ್ಯಾಯಪೀಠ ಉತ್ತರಿಸಿದೆ.