ದೇಶದಲ್ಲಿ ಒಂದೇ ದಿನ 3.46 ಲಕ್ಷ ಮಂದಿಯಲ್ಲಿ ಕೊರೋನ ಸೋಂಕು

ಹೊಸದಿಲ್ಲಿ : ದೇಶದಲ್ಲಿ ಕೊರೋನ ವೈರಸ್ ಸೋಂಕಿನ ಎರಡನೇ ಅಲೆಯ ಅಬ್ಬರ ಮುಂದುವರಿದಿದ್ದು, ಶುಕ್ರವಾರ ದಾಖಲೆ ಸಂಖ್ಯೆಯ ಅಂದರೆ 3.46 ಲಕ್ಷ ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ.
2600 ಮಂದಿ ಸೋಂಕಿತರು ಒಂದೇ ದಿನ ಜೀವ ಕಳೆದುಕೊಂಡಿದ್ದು, ಇದು ಕೂಡಾ ದಾಖಲೆಯಾಗಿದೆ. ಕೇವಲ ಮೂರು ದಿನಗಳಲ್ಲಿ ದೇಶದಲ್ಲಿ ಸುಮಾರು 10 ಲಕ್ಷ (9.94 ಲಕ್ಷ) ಪ್ರಕರಣಗಳು ವರದಿಯಾಗಿರುವುದು ಕೋವಿಡ್-19 ಸಾಂಕ್ರಾಮಿಕದ ತೀವ್ರತೆಗೆ ಸಾಕ್ಷಿಯಾಗಿದೆ. ಸತತ ನಾಲ್ಕನೇ ದಿನ ಭಾರತ ಎರಡು ಸಾವಿರಕ್ಕೂ ಅಧಿಕ ಸೋಂಕಿತರ ಸಾವನ್ನು ಕಂಡಿದೆ.
ಬ್ರೆಝಿಲ್‌ನಲ್ಲಿ 79,719, ಅಮೆರಿಕದಲ್ಲಿ 62,642 ಮತ್ತು ಟರ್ಕಿಯಲ್ಲಿ 54,791 ಪ್ರಕರಣಗಳು ದಾಖಲಾಗಿವೆ. ಹೀಗೆ ತೀವ್ರ ಬಾಧಿತವಾಗಿರುವ ಯಾವ ದೇಶದ ದೈನಿಕ ಪ್ರಕರಣಗಳ ಸಂಖ್ಯೆ ಕೂಡಾ ಭಾರತದ ಸಂಖ್ಯೆಯ ಸನಿಹಕ್ಕೂ ಇಲ್ಲ ಎನ್ನುವುದು ಗಮನಾರ್ಹ ಅಂಶವಾಗಿದೆ. ಗುರುವಾರ ವಿಶ್ವಾದ್ಯಂತ 8.9 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಭಾರತದ ಪಾಲು ಶೇಕಡ 37ರಷ್ಟಿದೆ.
ದೆಹಲಿ ಮತ್ತು ಮುಂಬೈನಲ್ಲಿ ಪ್ರಕರಣಗಳ ಸಂಖ್ಯೆ ಅತ್ಯಧಿಕ ಎಂಬ ವರದಿಗಳ ನಡುವೆಯೇ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು (1.5 ಲಕ್ಷ) ಇರುವ ಜಿಲ್ಲೆ ಎಂದು ಗರುತಿಸಲಾಗಿದೆ. ಪುಣೆ (1.2 ಲಕ್ಷ) ಮಾತ್ರ ಲಕ್ಷಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಯಾಗಿದೆ.
ಅತ್ಯಧಿಕ ಸಕ್ರಿಯ ಪ್ರಕರಣಗಳು ಇರುವ 10 ಜಿಲ್ಲೆಗಳ ಪೈಕಿ ಮಹಾರಾಷ್ಟ್ರದ ಪುಣೆ, ಮುಂಬೈ, ನಾಗ್ಪುರ, ಥಾಣೆ ಮತ್ತು ನಾಸಿಕ್ ಹೀಗೆ ಐದು ಜಿಲ್ಲೆಗಳು ಸೇರಿವೆ. ಹೈದರಾಬಾದ್‌ನಲ್ಲಿ 94 ಸಾವಿರ ಸಕ್ರಿಯ ಪ್ರಕರಣಗಳಿವೆ. ಅಗ್ರ 10ರ ಪಟ್ಟಿಯಲ್ಲಿ ಲಕ್ನೋ, ಕಮ್ರೂಪ್ ಮೆಟ್ರೊ (ಗುವಾಹತಿ) ಮತ್ತು ಅಹ್ಮದಾಬಾದ್ ಸೇರಿವೆ. ಕರ್ನಾಟಕದ ಒಟ್ಟು ಸಕ್ರಿಯ ಪ್ರಕರಣಗಳ ಶೇಕಡ 70ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿವೆ.







