ಮಹಾರಾಷ್ಟ್ರ, ದೆಹಲಿಯಲ್ಲಿ ಒಂದೇ ದಿನ ಸಾವಿರಕ್ಕೂ ಹೆಚ್ಚು ಕೊರೋನ ಸೋಂಕಿತರು ಮೃತ್ಯು

ಮುಂಬೈ/ ದೆಹಲಿ: ಮಹಾರಾಷ್ಟ್ರದಲ್ಲಿ ಶುಕ್ರವಾರ 773 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದು, ಇದು ಇದುವರೆಗಿನ ದಾಖಲೆಯಾಗಿದೆ. ಅಂತೆಯೇ ರಾಜಧಾನಿ ದೆಹಲಿ ಕೂಡಾ ಕಳೆದ 24 ಗಂಟೆಗಳಲ್ಲಿ 348 ಸಾವುಗಳನ್ನು ದಾಖಲಿಸಿದ್ದು, ಇದು ರಾಜಧಾನಿಯಲ್ಲಿ ಇದುವರೆಗೆ ದಾಖಲಾದ ಗರಿಷ್ಠ ಸಾವಿನ ಸಂಖ್ಯೆಯಾಗಿದೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ 66,836 ಹೊಸ ಪ್ರಕರಣಗಳು ಸೇರ್ಪಡೆಯಾಗಿರುವುದು ರಾಜ್ಯದಲ್ಲಿ ಎರಡನೇ ಅಲೆಯ ಅಬ್ಬರಕ್ಕೆ ಸಾಕ್ಷಿಯಾಗಿದೆ. ಆದಾಗ್ಯೂ ವಾರಗಳ ಬಳಿಕ ಇದೇ ಮೊದಲ ಬಾರಿಗೆ ಹೊಸ ಪ್ರಕರಣಗಳಿಗಿಂತ ಅಧಿಕ ಸಂಖ್ಯೆಯ ರೋಗಿಗಳು ಗುಣಮುಖರಾಗಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಶುಕ್ರವಾರ 74,045 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರಾದವರ ಪ್ರಮಾಣ ಶೇಕಡ 81.81ರಷ್ಟಿದೆ. ರಾಜ್ಯದಲ್ಲಿ ಪ್ರಸ್ತುತ 6,91,851 ಸಕ್ರಿಯ ಪ್ರಕರಣಗಳಿದ್ದು, ಸಾವಿನ ದರ ಶೇಕಡ 1.52ರಷ್ಟಿದೆ. ಮಹಾರಾಷ್ಟ್ರದಲ್ಲಿ ಪ್ರಕರಣಗಳ ಧನಾತ್ಮಕತೆ ದರ ಶೇಕಡ 16.53 ರಷ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೂಡಾ ಕೋವಿಡ್ ಸೋಂಕು ಹೆಚ್ಚಳವಾಗಿದ್ದು, ಶುಕ್ರವಾರ ಇದುವರೆಗಿನ ಗರಿಷ್ಠ ಅಂದರೆ 348 ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ 24 ಗಂಟೆಗಳಲ್ಲಿ 24,331 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಈ ತಿಂಗಳು ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಧನಾತ್ಮಕತೆ ದರ ಶೇಕಡ 32ರಷ್ಟಿದೆ. ಪ್ರಸ್ತುತ ದೆಹಲಿಯಲ್ಲಿ 92,000 ಸಕ್ರಿಯ ಪ್ರಕರಣಗಳಿದ್ದು, ಇದು ಕೂಡಾ ಇದುವರೆಗಿನ ಗರಿಷ್ಠ ಎಂದು ಅಧಿಕಾರಿಗಳು ತಿಳಿಸಿದ್ದಾರೆ.