ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿದ ಸಿಬಿಐ
ಮುಂಬೈ, ನಾಗ್ಪುರ ಸಹಿತ ದೇಶ್ ಮುಖ್ ಗೆ ಸೇರಿರುವ ನಾಲ್ಕು ಸ್ಥಳಗಳ ಮೇಲೆ ದಾಳಿ

photo: ANI
ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ ಅವರ ಮನೆಯನ್ನು ಶನಿವಾರ ಬೆಳಗ್ಗೆ ಶೋಧಿಸಿದೆ.
ದೇಶ್ ಮುಖ್ ವಿರುದ್ದ ಭ್ರಷ್ಟಾಚಾರ ಆರೋಪದ ಕುರಿತಾಗಿ ಪ್ರಾಥಮಿಕ ತನಿಖೆಯು ಕಳೆದ ಶುಕ್ರವಾರ ಪೂರ್ಣಗೊಂಡಿತ್ತು.
ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮಾಡಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಈ ತಿಂಗಳಾರಂಭದಲ್ಲಿ ಬಾಂಬೆ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ಭ್ರಷ್ಟಾಚಾರ ಪ್ರಕರಣ ದಾಖಲಿಸಬೇಕೋ, ಬೇಡವೋ 15 ದಿನಗಳಲ್ಲಿ ನಿರ್ಧsರಿಸುವಂತೆ ತಿಳಿಸಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಕಾರ್ಯಪ್ರವೃತರಾದ ಸಿಬಿಐ ದೇಶ್ ಮುಖ್ ಹಾಗೂ ಇತರ ಹಲವರ ವಿರುದ್ದ ಎಪ್ರಿಲ್ 6ರಂದು ಪ್ರಾಥಮಿಕ ತನಿಖೆ ನಡೆಸಿತ್ತು.
ಪ್ರಕರಣ ದಾಖಲಿಸಿಕೊಂಡ ಬಳಿಕ ಸಿಬಿಐ ಇದೀಗ ಅನಿಲ್ ದೇಶ್ ಮುಖ್ ಅವರಿಗೆ ಸೇರಿರುವ ಮುಂಬೈ ಹಾಗೂ ನಾಗ್ಪುರದಲ್ಲಿರುವ ನಿವಾಸಗಳು ಸೇರಿದಂತೆ ನಾಲ್ಕು ಕಡೆ ದಾಳಿ ನಡೆಸಿದೆ.
ಈ ತಿಂಗಳಾರಂಭದಲ್ಲಿ ಅನಿಲ್ ದೇಶ್ ಮುಖ್ ನೈತಿಕ ಹೊಣೆಹೊತ್ತು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.





