ಭಾರತದ ಮುಖ್ಯ ನ್ಯಾಯಾಧೀಶರಾಗಿ ಜಸ್ಟಿಸ್ ಎನ್.ವಿ.ರಮಣ ಪ್ರಮಾಣ ಸ್ವೀಕಾರ

ಹೊಸದಿಲ್ಲಿ: ಜಸ್ಟಿಸ್ ಎನ್.ವಿ.ರಮಣ ಅವರು ಭಾರತದ 48ನೇ ಮುಖ್ಯ ನ್ಯಾಯಾಧೀಶರಾಗಿ ಶನಿವಾರ ಬೆಳಗ್ಗೆ ಪ್ರಮಾಣವಚನ ಸ್ವೀಕರಿಸಿದರು.
ಕೋವಿಡ್ ನಿರ್ಬಂಧದಿಂದಾಗಿ ನಡೆದ ಸರಳ ಸಮಾರಂಭದಲ್ಲಿ ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಮಣ ಅವರಿಗೆ ಪ್ರಮಾಣವಚನ ಬೋಧಿಸಿದರು.
ರಮಣ ಅವರು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಬೋಬ್ಡೆ ಅವರು ಶುಕ್ರವಾರ ಮುಖ್ಯ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತಿಯಾಗಿದ್ದಾರೆ."
"ನಾವು ಕೋವಿಡ್-19 ಎರಡನೇ ಅಲೆಯ ವಿರುದ್ದ ಹೋರಾಡುತ್ತಿದ್ದು, ಪರೀಕ್ಷಾ ಸಮಯವನ್ನು ಎದುರಿಸುತ್ತಿದ್ದೇವೆ. ವಕೀಲರು, ನ್ಯಾಯಾಧೀಶರು ಹಾಗೂ ನ್ಯಾಯಾಲಯದ ಸಿಬ್ಬಂದಿ ಎಲ್ಲರೂ ಕೋವಿಡ್ ವೈರಸ್ ನಿಂದ ಬಾಧಿತರಾಗಿದ್ದಾರೆ. ಪ್ರಸರಣದ ಸರಪಳಿಯನ್ನು ಮುರಿಯಲು ಕೆಲವು ಕಠಿಣ ಕ್ರಮಗಳು ಅಗತ್ಯವಾಗಬಹುದು. ನಾವು ಸಾಂಕ್ರಾಮಿಕವನ್ನು ಒಟ್ಟಾಗಿ ಸಮರ್ಪಣೆಯಿಂದ ಸೋಲಿಸಬಹುದು'' ಎಂದು ಜಸ್ಟಿಸ್ ಎಸ್.ಎ.ಬೋಬ್ಡೆ ಅವರಿಗೆ ವಿದಾಯ ಕೋರಿದ ಕಾರ್ಯಕ್ರಮದಲ್ಲಿ ರಮಣ ಹೇಳಿದ್ದಾರೆ.
ಆಗಸ್ಟ್ 27, 1957ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೃಷಿ ಕುಟುಂಬದಲ್ಲಿ ಜನಿಸಿದ 63 ವರ್ಷದ ನ್ಯಾಯಮೂರ್ತಿ ರಮಣ ಅವರು 2022ರ ಆಗಸ್ಟ್ 26ರ ತನಕ ಒಂದು ವರ್ಷ, 4 ತಿಂಗಳು ದೇಶದ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಮಣ ಅವರು ಮುಖ್ಯನ್ಯಾಯಮೂರ್ತಿಯಾಗಿ ಆಯ್ಕೆಯಾಗಿರುವ ಆಂಧ್ರದ ಎರಡನೇ ನ್ಯಾಯಧೀಶರಾಗಿದ್ದಾರೆ. 1966-67ರ ತನಕ ನ್ಯಾಯಮೂರ್ತಿ ಕೆ.ಸುಬ್ಬರಾವ್ ಅವರು ಭಾರತದ 9ನೇ ಮುಖ್ಯನ್ಯಾಯಾಧೀಶರಾಗಿದ್ದರು.





