ಟ್ವೆಂಟಿ-20: ಕಡಿಮೆ ಸ್ಕೋರ್ ಗಳಿಸಿದರೂ ಪಾಕ್ ಗೆ ಸೋಲುಣಿಸಿದ ಝಿಂಬಾಬ್ವೆ

ಹರಾರೆ: ಆತಿಥೇಯ ಝಿಂಬಾಬ್ವೆ ತಂಡ ಶುಕ್ರವಾರ ಹರಾರೆ ಸ್ಪೋಟ್ರ್ಸ್ ಕ್ಲಬ್ ನಲ್ಲಿ ನಡೆದ ಎರಡನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನವನ್ನು 19 ರನ್‍ಗಳ ಅಂತರದಿಂದ ಮಣಿಸಿ ಆಘಾತ ನೀಡಿದೆ.
ಝಿಂಬಾಬ್ವೆ ಇದೇ ಮೊದಲ ಬಾರಿ ಟ್ವೆಂಟಿ-20 ಕ್ರಿಕೆಟ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿದೆ. ಝಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಿ ಕೇವಲ 118 ರನ್ ಗಳಿಸಿದರೂ ಬಾಬರ್ ಆಝಂ, ಫಾಖರ್ ಝಮಾನ್, ಮುಹಮ್ಮದ್ ರಿಝ್ವಾನ್ ರಂತಹ ಘಟಾನುಘಟಿ ಆಟಗಾರರಿರುವ ಪಾಕಿಸ್ತಾನವನ್ನು ಕೇವಲ 99 ರನ್ ಗೆ ಆಲೌಟ್ ಮಾಡಿರುವುದು ಗಮನಾರ್ಹವಾಗಿದೆ. ಈ ಗೆಲುವಿನ ಮೂಲಕ ಝಿಂಬಾಬ್ವೆ 3 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.
ಪಾಕಿಸ್ತಾನ ನಾಯಕ ಬಾಬರ್ ಆಝಮ್(41 ರನ್, 45 ಎಸೆತ)ತನ್ನ ತಂಡ ಗಳಿಸಿದ ಸುಮಾರು ಅರ್ಧದಷ್ಟು ರನ್ ಒಬ್ಬರೇ ಗಳಿಸಿದರು. ಆಝಮ್ ಹೊರತುಪಡಿಸಿ ಕೇವಲ ಇಬ್ಬರು ದಾಂಡಿಗರು ಮಾತ್ರ ಎರಡಂಕೆಯ ಸ್ಕೋರ್ ಗಳಿಸಿದರು.
ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ತಮ್ಮ ತಂಡದ ಕಳಪೆ ಬ್ಯಾಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮೊದಲು ಟಾಸ್ ಜಯಿಸಿದ್ದ ಪಾಕ್ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. 20 ಓವರ್ ಗಳಲ್ಲಿ ಝಿಂಬಾಬ್ವೆಯನ್ನು 9 ವಿಕೆಟ್ ನಷ್ಟಕ್ಕೆ 118 ರನ್ ಗೆ ನಿಯಂತ್ರಿಸಿತು. ಆತಿಥೇಯರ ಪರ ತಿನಾಶೆ ಕುಮುನ್ ಹುಕಾಮ್ವೆ 40 ಎಸೆತಗಳಲ್ಲಿ 34 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಇನ್ನುಳಿದ ಆಟಗಾರರು 20ರ ಗಡಿ ದಾಟಲಿಲ್ಲ.
ಮುಹಮ್ಮದ್ ಹಸನೈನ್ ಹಾಗೂ ದಾನಿಶ್ ಆಝೀಝ್ ತಲಾ ಎರಡು ವಿಕೆಟ್ ಗಳನ್ನು ಪಡೆದರು.
ಗೆಲ್ಲಲು ಸುಲಭ ಸವಾಲು ಪಡೆದಿದ್ದ ಪಾಕಿಸ್ತಾನದ ಮಧ್ಯಮ ಸರದಿಯ ಆಟಗಾರರ ವಿಕೆಟ್ ತರಗಲೆಯಂತೆ ಉರುಳಿದರು. ಝಿಂಬಾಬ್ವೆಗೆ ಅಪರೂಪದ ಗೆಲುವು ಪಡೆಯಲು ಕಾರಣರಾದರು. ಝಿಂಬಾಬ್ವೆ ಪರ ಲುಕ್ ಜಾಂಗ್ವೆ 3.5 ಓವರ್ ಗಳಲ್ಲಿ 18 ರನ್ ಗೆ 4 ವಿಕೆಟ್ ಗಳನ್ನು ಪಡೆದಿದ್ದಾರೆ.







