ವಾರಾಂತ್ಯದ ಕರ್ಫ್ಯೂಗೆ ಬಂಟ್ವಾಳ ತಾಲೂಕು ಸ್ತಬ್ಧ

ಬಂಟ್ವಾಳ, ಎ.24: ಹೆಚ್ಚುತ್ತಿರುವ ಕೊರೋನ ವೈರಸ್ ಅನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರದ ಮಾರ್ಗಸೂಚಿಯಂತೆ ವಾರಾಂತ್ಯ ಕರ್ಫ್ಯೂ ದಿನವಾದ ಶನಿವಾರ ಬೆಳಗ್ಗೆ 11 ಗಂಟೆಯಾಗುತ್ತಿದ್ದಂತೆ ಬಂಟ್ವಾಳ ತಾಲೂಕು ಸಂಪೂರ್ಣ ಸ್ತಬ್ಧಗೊಂಡಿದೆ.
ಸದಾ ಜನಜಂಗುಳಿಯಿಂದ ತುಳುಕುತ್ತಿರುವ ಇಡೀ ತಾಲೂಕಿನ ಕೇಂದ್ರ ಸ್ಥಾನ, ಪ್ರಮುಖ ವ್ಯಾಪಾರ, ವ್ಯಾವಹಾರಿಕ ಕೇಂದ್ರ, ಮಿನಿವಿಧಾನ ಸೌಧ, ನ್ಯಾಯಾಲಯ, ಪೊಲೀಸ್ ಠಾಣೆ, ಶಾಸಕರ ಕಚೇರಿ ಸಹಿತ ಸರಕಾರಿ ಹಾಗೂ ವಿವಿಧ ಖಾಸಗಿ ಕಚೇರಿಗಳನ್ನು ಹೊಂದಿರುವ ಬಿ.ಸಿ.ರೋಡ್ 11 ಗಂಟೆಯ ಬಳಿಕ ಬಿಕೋ ಎನ್ನುತ್ತಿದೆ.
ಹಾಗೆಯೇ ವಾರಾಂತ್ಯ ಕರ್ಫ್ಯೂಗೆ ಬಂಟ್ವಾಳ ತಾಲೂಕಿನಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರಗಳಾದ ಮಾಣಿ, ಕಲ್ಲಡ್ಕ, ವಿಟ್ಲ, ಮೆಲ್ಕಾರ್, ಪಾಣೆಮಂಗಳೂರು, ತುಂಬೆ, ಫರಂಗಿಪೇಟೆ, ಸಿದ್ದಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಬೆಳಗ್ಗೆ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು 11 ಗಂಟೆ ಆಗುತ್ತಿ ದ್ದಂತೆ ಬಂದ್ ಮಾಡಿ ವ್ಯಾಪಾರಿಗಳು ಮನೆ ಸೇರಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ 11 ಗಂಟೆಯ ವರೆಗೆ ಮಡಿಕಲ್, ದಿನಸಿ, ತರಕಾರಿ, ಹಣ್ಣು, ಮೀನು, ಮಾಂಸ, ಹಾಲು ಮೊದಲಾದ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ವಸ್ತುಗಳನ್ನು ಖರೀದಿಸಲೂ ಜನರಿಗೆ ಅವಕಾಶ ನೀಡಲಾ ಗಿತ್ತು. ಆದರೆ ಬಿ.ಸಿ.ರೋಡ್ ಪರಿಸರದಲ್ಲಿ ಕೆಲವು ಅಗತ್ಯ ವಸ್ತುಗಳ ಅಂಗಡಿಗಳು ಬೆಳಗ್ಗೆಯಿಂದಲೇ ಬಾಗಿಲು ಮುಚ್ಚಿತ್ತು.
ತಾಲೂಕಿನ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಹಾಗೂ ಒಳ ರಸ್ತೆಗಳಲ್ಲಿ ಬೆಳಗ್ಗೆಯಿಂದ ವಾಹನಗಳ ಓಡಾಟ ತೀರ ವಿರಳ ವಾಗಿತ್ತು. 11 ಗಂಟೆಯಾಗುತ್ತಿದ್ದಂತೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ತಾಲೂಕಿನ ಪ್ರಮುಖ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.






.jpeg)
.jpeg)
.jpeg)
.jpeg)


