ಅದು ಮನೆಯಲ್ಲಿ ನಡೆದ ಕುಟುಂಬ ಕಾರ್ಯಕ್ರಮ, ಸಾರ್ವಜನಿಕ ಸಮಾರಂಭ ಅಲ್ಲ : ಉಡುಪಿ ಡಿಸಿ
ಮಾಸ್ಕ್ ಧರಿಸದೆ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಯ ಫೋಟೊ ವೈರಲ್

ಉಡುಪಿ, ಎ.24: ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿಯ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ ಭಾಗವಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣರಾದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಈ ಕುರಿತು ಪ್ರತಿಕ್ರಿಯಿಸಿ, ‘ಇದೊಂದು ಮನೆಯಲ್ಲಿ ನಡೆದ ಕುಟುಂಬ ಕಾರ್ಯಕ್ರಮವೇ ಹೊರತು ಸಾರ್ವಜನಿಕ ಕಾರ್ಯಕ್ರಮ ಅಲ್ಲ’ ಎಂದು ಹೇಳಿದ್ದಾರೆ.
‘ನನ್ನ ಮನೆಯ ಪಕ್ಕದಲ್ಲಿರುವ ಹೆಚ್ಚುವರಿ ಎಸ್ಪಿ ಮನೆಯಲ್ಲಿ ಅವರ ಮಗಳ ಮೆಹಂದಿ ಕಾರ್ಯಕ್ರಮವನ್ನು ಕೇವಲ ನಾಲ್ಕು ಕುಟುಂಬಗಳಿಗೆ ಸೀಮಿತಗೊಳಿಸಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಅವರ ಕ್ಲೋಸ್ ಫ್ಯಾಮಿಲಿಯ ಕೆಲವೇ ಕೆಲವು ಮಂದಿ ಸೇರಿದ್ದರು. ಅದು ಸಾರ್ವಜನಿಕ ಸ್ಥಳ ಅಲ್ಲ. ಆದುದರಿಂದ ಅಲ್ಲಿ ಮಾಸ್ಕ್ ಧರಿಸಬೇಕೆಂಬುದು ಕಡ್ಡಾಯ ಅಲ್ಲ. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗಿರುವುದು ಸಾರ್ವಜನಿಕ ಸ್ಥಳದಲ್ಲಿ ಮಾತ್ರ’ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು.
ಶುಕ್ರವಾರ ರಾತ್ರಿ 8.40ಕ್ಕೆ ಆ ಕಾರ್ಯಕ್ರಮಕ್ಕೆ ಹೋಗಿ 8.50ಕ್ಕೆ ಕರ್ಫ್ಯೂಗಿಂತ ಮೊದಲೇ ಮನೆ ಸೇರಿದ್ದೇನೆ. ಅಲ್ಲಿ ನಾವು ಐದಾರು ನಿಮಿಷಗಳ ಕಾಲ ಮಾತ್ರ ಇದ್ದೆವು. ಮಧುಮಗಳ ಕೋರಿಕೆ ಮೇರೆಗೆ ಆಕೆಯೊಂದಿಗೆ ಫೋಟೋಗಾಗಿ ಒಂದು ನಿಮಿಷ ಮಾತ್ರವೇ ಮಾಸ್ಕ್ ತೆಗೆದಿದ್ದೇನೆ. ಅಲ್ಲದೆ ಆ ಕಾರ್ಯಕ್ರಮದಲ್ಲಿ ನಾನು ಊಟ ಕೂಡ ಮಾಡದೆ ಬಂದಿದ್ದೇನೆ’ ಎಂದು ಜಿಲ್ಲಾಧಿಕಾರಿ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.





