ಶಾಹೀನ್ ಸಂಸ್ಥೆಯಿಂದ 400 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್, ಉಚಿತ ಆಂಬುಲೆನ್ಸ್ ಸೇವೆ ಆರಂಭ

ಬೀದರ್: ಜಿಲ್ಲೆಯ ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತಿರುವ ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಗಳನ್ನೂ ಅತ್ಯುತ್ತಮ ರೀತಿಯಲ್ಲಿ ನಿಭಾಯಿಸುತ್ತ ಬಂದಿದೆ. ಇದೀಗ ಕೋವಿಡ್-19 ಎರಡನೇ ಅಲೆಯಿಂದ ಸಂಕಟಕ್ಕೀಡಾದ ಬೀದರ್ ನಗರದ ನಿವಾಸಿಗಳಿಗೆ ನೆರವಾಗಲು ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದೆ.
ಸಂಸ್ಥೆಯ ಅಧ್ಯಕ್ಷರಾದ ಡಾ. ಅಬ್ದುಲ್ ಖದೀರ್ ಅವರು ಶನಿವಾರ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು. ಆಕ್ಸಿಜನ್ ಸೌಲಭ್ಯ ಇರುವ ಎರಡುಆಂಬುಲೆನ್ಸ್ ಗಳು ಹಗಲೂ ರಾತ್ರಿ ಸಾರ್ವಜನಿಕರ ಸೇವೆಗೆ ಲಭ್ಯವಿರಲಿವೆ.
ಕರೆ ಬಂದ ತಕ್ಷಣ ಹಾಜರಾಗಿ, ತೊಂದರೆಯಲ್ಲಿದ್ದವರನ್ನು ಬ್ರಿಮ್ಸ್ ಆಸ್ಪತ್ರೆಗೆ ತಲುಪಿಸಲಾಗುತ್ತದೆ. ವಾರಾಂತ್ಯ ಕರ್ಫ್ಯೂ ಇರುವ ಈಗಿನ ಸಮಯದಲ್ಲಿ ಆಂಬುಲೆನ್ಸ್ ಸೇವೆಯು ನಿಜಕ್ಕೂ ಉಪಯುಕ್ತವಾಗಲಿದೆ. ತುರ್ತು ವೈದ್ಯಕೀಯ ಆರೈಕೆ, ಚಿಕಿತ್ಸೆಯ ಅಗತ್ಯ ಇದ್ದವರು ಈ ಉಚಿತ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.
ಆ್ಯಂಬುಲೆನ್ಸ್ ಸೇವೆಗಾಗಿ ಮೊಬೈಲ್ ಸಂಖ್ಯೆ 8884794444 ಅನ್ನು ಸಂಪರ್ಕಿಸಬಹುದು. ಅಥವಾ ಯೋಜನಾ ಸಂಯೋಜಕ ಅಮಿತ್ ಚಂದಾ (9164447975) ಅವರನ್ನು ಸಂಪರ್ಕಿಸಬಹುದು.
ಕೋವಿಡ್ ಸಾಂಕ್ರಾಮಿಕದ ಈ ಸಂಕಟದ ಘಳಿಗೆಯಲ್ಲಿ ಈಗಾಗಲೇ ಎರಡು ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಶಾಹೀನ್ ಸಂಸ್ಥೆಯು ಜಿಲ್ಲಾ ಆಡಳಿತಕ್ಕೆ ಅಗತ್ಯ ಸಹಕಾರ, ಬೆಂಬಲ ನೀಡಿದೆ. ಈ ಎರಡೂ ಕೇಂದ್ರಗಳಲ್ಲಿ 400 ಬೆಡ್ ಗಳ ಸೌಲಭ್ಯವಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.








