ರೆಮ್ಡೆಸಿವಿರ್ ಅಕ್ರಮದ ವಿರುದ್ಧ ಸಿಸಿಬಿ ಕಾರ್ಯಾಚರಣೆ: 55 ಚುಚ್ಚುಮದ್ದು ಬಾಟಲಿಗಳ ಜಪ್ತಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.24: ಕೋವಿಡ್ ಸಂಬಂಧ ಸೋಂಕಿತರಿಗೆ ನೀಡುವ ರೆಮ್ಡೆಸಿವಿರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಸಿಸಿಬಿ ಪೊಲೀಸರು 55 ಚುಚ್ಚುಮದ್ದು ಬಾಟಲಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಹಲವೆಡೆ ಏಕಕಾಲದಲ್ಲಿ ದಾಳಿ ಮಾಡಿರುವ ಸಿಸಿಬಿ ತಂಡ, ನಹುಜೇಫ, ಮೆಡಿಕಲ್ ಸ್ಟೋರ್ ಗಳ ನಿರ್ವಹಣೆ ಮಾಡುತ್ತಿದ್ದ ಮ್ಯಾಟೀನ್, ಮೆಡಿಕಲ್ ಸಿಬ್ಬಂದಿ ಕೆ.ಪಿ.ಸುಮನ್, ಪ್ರಕಾಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ಬಂಧಿತರ ಪೈಕಿ ಇಬ್ಬರು ಆರೋಪಿಗಳು ವೈದ್ಯಕೀಯ ಔಷಧಿಗಳ ವಿತರಕರಾಗಿದ್ದು, ಇಲ್ಲಿಯವರೆಗೆ ರೆಮ್ಡೆಸಿವಿರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 16 ಮಂದಿ ಆರೋಪಿಗಳನ್ನು ಬಂಧಿಸಿ ಅವರೆಲ್ಲರ ವಿರುದ್ದ ಆಯಾ ಪೊಲೀಸ್ ಠಾಣಾಗಳ ವ್ಯಾಪ್ತಿಯಲ್ಲಿ 6 ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ ಎಂದರು.
ಬಂಧಿತರು ಅಕ್ರಮವಾಗಿ ಔಷಧಿ ಸಂಗ್ರಹಿಸಿಟ್ಟು, ಬೇಡಿಕೆ ಹೆಚ್ಚಾಗುವಂತೆ ವಾತಾವರಣ ಸೃಷ್ಟಿಸುತ್ತಿದ್ದರು. ಆ ನಂತರ, ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಜಾಲದಲ್ಲಿ ಮತ್ತಷ್ಟು ಮಂದಿ ಇದ್ದು, ಅವರ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದರು.







