ವೈದ್ಯಕೀಯ ಆಮ್ಲಜನಕದ ಕೊರತೆ: ಹಾಸಿಗೆ ಸಂಖ್ಯೆಯನ್ನು ಕಡಿತಗೊಳಿಸಿದ ದಿಲ್ಲಿಯ 2 ಪ್ರಮುಖ ಆಸ್ಪತ್ರೆಗಳು

ಹೊಸದಿಲ್ಲಿ: ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ದಿಲ್ಲಿಯ ಎರಡು ಪ್ರಮುಖ ಆಸ್ಪತ್ರೆಗಳು ಕೋವಿಡ್ -19 ರೋಗಿಗಳಿಗೆ ಮೀಸಲಾಗಿದ್ದ ಆಸ್ಪತ್ರೆ ಹಾಸಿಗೆಗಳ ಸಂಖ್ಯೆಯನ್ನು ಶೇಕಡಾ 40 ರಷ್ಟು ಕಡಿತಗೊಳಿಸಿವೆ. ರಾಷ್ಟ್ರ ರಾಜಧಾನಿಯಲ್ಲಿ ಕೊರೋನ ಸೋಂಕು ಹಿಂದೆಂದೂ ಕಾಣದಷ್ಟು ಉಲ್ಬಣಕ್ಕೆ ಒಳಗಾಗುತ್ತಿರುವ ಸಂದರ್ಭದಲ್ಲಿ,ಆಸ್ಪತ್ರೆಗಳ ಈ ಕ್ರಮವು ಸಾಂಕ್ರಾಮಿಕ ರೋಗದ ವಿರುದ್ಧ ದಿಲ್ಲಿಯ ಹೋರಾಟದ ಮೇಲೆ ತೀವ್ರ ಪರಿಣಾಮ ಬೀರಬಹುದು.
ದಿಲ್ಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಸಿಗೆಗಳ ಸಾಮರ್ಥ್ಯವನ್ನು300ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ಇದರರ್ಥ ಕೋವಿಡ್ -19 ರೋಗಿಗಳಿಗೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೇವಲ 350 ಹಾಸಿಗೆಗಳಿವೆ.
ಅದೇ ರೀತಿ ದಿಲ್ಲಿಯ ಜಿಟಿಬಿ ಆಸ್ಪತ್ರೆಯು ಈ ಹಿಂದೆ ಕೊರೋನ ವೈರಸ್ ರೋಗಿಗಳಿಗೆ 1,500 ಹಾಸಿಗೆಗಳನ್ನು ಹೊಂದಿತ್ತು. ಇದೀಗ 800 ಹಾಸಿಗೆಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ಅಂದರೆ ಜಿಟಿಬಿ ಆಸ್ಪತ್ರೆಯಲ್ಲಿ ಕೋವಿಡ್ -19 ರೋಗಿಗಳಿಗೆ ಈಗ ಕೇವಲ 700 ಹಾಸಿಗೆಗಳು ಲಭ್ಯವಿದೆ.
ದಿಲ್ಲಿ ಸರಕಾರದ ಮೊಬೈಲ್ ಆ್ಯಪ್‌ನಲ್ಲೂ ಇದು ಪ್ರತಿಫಲಿಸುತ್ತಿದೆ.
ದಿಲ್ಲಿಯ ಬಾತ್ರಾ ಆಸ್ಪತ್ರೆಯ ಎಂಡಿ ಡಾ.ಎಸ್.ಸಿ.ಎಲ್ ಗುಪ್ತಾ ಅವರು ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ ಪರಿಸ್ಥಿತಿ ನೆನೆದು ಕಣ್ಣೀರಿಟ್ಟರು.
"ಒ 2 ಲಭ್ಯವಿರುವ ಕಡೆಗಳಲ್ಲಿ ತಮ್ಮ ರೋಗಿಗಳನ್ನು ಕರೆದೊಯ್ಯುವಂತೆ ನಾವು ಜನರನ್ನು ವಿನಂತಿಸುತ್ತಿದ್ದೇವೆ. ರೋಗಿಯು ಯಾರಾದರೊಬ್ಬರ ತಾಯಿಯೋ, ತಂದೆಯೋ ಆಗಿರುತ್ತಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ .. ನಾನು ಯಾರನ್ನಾದರೂ ಹತ್ತಿರದವರನ್ನು ಕಳೆದುಕೊಂಡರೆ, ಸಹಜವಾಗಿ ಕೆಟ್ಟ ಅನುಭವವಾಗುತ್ತದೆ" ಎಂದು ಗುಪ್ತಾ ಹೇಳಿದ್ದಾರೆ.







