ವಾರಾಂತ್ಯ ಕರ್ಫ್ಯೂಗೆ ಉಡುಪಿ ಜಿಲ್ಲೆ ಸಂಪೂರ್ಣ ಸ್ತಬ್ಧ: ವ್ಯಾಪಾರ ವಹಿವಾಟು ಸ್ಥಗಿತ
ರಸ್ತೆಗೆ ಇಳಿಯದ ಖಾಸಗಿ ಬಸ್ಗಳು

ಉಡುಪಿ, ಎ.24: ಕೊರೋನಾ ಎರಡನೆ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಘೋಷಿಸಿರುವ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಉಡುಪಿ ಜಿಲ್ಲೆಯಾದ್ಯಂತ ವ್ಯಾಪಾರ ವಹಿವಾಟು ಹಾಗೂ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿತ್ತು.
ಉಡುಪಿ ನಗರ, ಕಾಪು, ಕಟಪಾಡಿ, ಶಿರ್ವ, ಪಡುಬಿದ್ರಿ, ಕಾರ್ಕಳ, ಹೆಬ್ರಿ, ಹಿರಿಯಡ್ಕ, ಮಣಿಪಾಲ, ಬ್ರಹ್ಮಾವರ, ಮಲ್ಪೆಯಲ್ಲಿ ವಾರಾಂತ್ಯ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಬೆಳಗ್ಗೆ 10ಗಂಟೆಯ ನಂತರ ಸರಕಾರಿ ಬಸ್, ಮೆಡಿಕಲ್, ಆಸ್ಪತ್ರೆ, ರಿಕ್ಷಾ ಹೊರತು ಪಡಿಸಿ ಉಳಿದ ಎಲ್ಲ ಆರ್ಥಿಕ ಚಟುವಟಿಕೆ ಗಳು ಸಂಪೂರ್ಣ ಸ್ಥಗಿತಗೊಂಡಿದ್ದವು.
ಬೆಳಗ್ಗೆ ತರಕಾರಿ, ದಿನಸಿ, ಹೂವು, ಹಾಲಿನ ಅಂಗಡಿಗಳು ತೆರೆದಿದ್ದು, ಜನ ಸಂಚಾರ ಬಹಳ ವಿರಳವಾಗಿ ಕಂಡುಬಂದವು. ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ವಾಹನ ಸಂಚಾರ ಬೆರಳಣಿಕೆಯಷ್ಟು ಮಾತ್ರ ಇದ್ದವು. ಬೆಳಗ್ಗೆ 10ಗಂಟೆಯ ಬಳಿಕ ಎಲ್ಲ ಅಂಗಡಿಗಳನ್ನು ಸ್ಥಳೀಯಾಡಳಿತ ಹಾಗೂ ಪೊಲೀಸರು ಧ್ವನಿ ವರ್ಧಕದ ಮೂಲಕ ಬಂದ್ ಮಾಡುವಂತೆ ಸೂಚಿಸಿದರು. ಅದರಂತೆ ವರ್ತಕರು ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದರು. ಇದರಿಂದ ಇಡೀ ಜಿಲ್ಲೆಯ ಪ್ರಮುಖ ಬೀದಿಗಳು ಜನ ಹಾಗೂ ವಾಹನ ಸಂಚಾರ ಇಲ್ಲದೆ ಬೀಕೋ ಎನ್ನುತ್ತಿದ್ದವು.
ಖಾಸಗಿ ಬಸ್ ಓಡಿಸಲು ಅನುಮತಿ ಇದ್ದರೂ ಪ್ರಯಾಣಿಕರ ಕೊರತೆ ಹಿನ್ನೆಲೆ ಯಲ್ಲಿ ಖಾಸಗಿ ಬಸ್‌ಗಳು ಇಂದು ರಸ್ತೆಗೆ ಇಳಿದಿಲ್ಲ. ಉಡುಪಿ ಸರ್ವಿಸ್, ಎಕ್ಸ್‌ಪ್ರೆಸ್, ಶಿವಮೊಗ್ಗ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳು ಮತ್ತು ಸಿಟ್ ಬಸ್‌ಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಇದರಿಂದ ಸರ್ವಿಸ್ ಹಾಗೂ ಸಿಟಿ ಬಸ್ ನಿಲ್ದಾಣಗಳು ಬೀಕೊ ಎನ್ನುತ್ತಿದ್ದವು.
ವಾಹನ ತಾಪಸಣೆ, ಲಾಠಿ ಬೀಸಿದ ಪೊಲೀಸರು!
ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಮೂರು ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಕಲ್ಸಂಕ, ಬನ್ನಂಜೆ, ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ತಾಪಸಣೆ ಮಾಡಲಾಯಿತು.
ಅದೇ ರೀತಿ ಮಲ್ಪೆ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯ ತಲಾ ಎರಡು ಕಡೆ ಚೆಕ್‌ಪೋಸ್ಟ್ ನಿರ್ಮಿಸಲಾಗಿತ್ತು. ಉಳಿದಂತೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ವಾಹನ ತಾಪಸಣೆ ನಡೆಸಲಾಗಿತ್ತು. ಅನಗತ್ಯವಾಗಿ ಹೊರಗಡೆ ಬಂದ ಕೆಲವರನ್ನು ಪೊಲೀಸರು ಲಾಠಿ ಬೀಸಿ ಕಳುಹಿಸಿದರು. ಉಡುಪಿ ಎಸ್ಪಿ ವಿಷ್ಣುವರ್ಧನ್ ಉಡುಪಿ ನಗರ, ಮಣಿಪಾಲ, ಹಿರಿಯಡ್ಕ, ಕಾಪು, ಬ್ರಹ್ಮಾವರ ಪೇಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ
ಕರ್ಫ್ಯೂ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ ಓಡಾಟ ನಡೆಸಿದ್ದು, ಉಡುಪಿ ಜಿಲ್ಲೆ ಯಲ್ಲಿ ಒಟ್ಟು 7-8 ಸರಕಾರಿ ಬಸ್ಗಳು ಮಾತ್ರ ಸಂಚಾರ ನಡೆಸಿತ್ತು.
ಉಡುಪಿ ಡಿಪ್ಪೊದಿಂದ ಮೈಸೂರು, ಚಿಕ್ಕಮಗಳೂರು, ಹುಬ್ಬಳ್ಳಿ, ಮಲ್ಪೆ ಪಡು ಕೆರೆ ಮಾರ್ಗದಲ್ಲಿ ಒಟ್ಟು ಏಳು ಬಸ್‌ಗಳು ಸಂಚರಿಸಿದ್ದವು. ಎಲ್ಲ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಮಾತ್ರ ತೀರ ವಿರಳವಾಗಿದ್ದವು. ಅದೇ ರೀತಿ ಹೊರ ಜಿಲ್ಲೆಯ ಆಗಮಿಸಿದ ಬಸ್‌ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಕುಂದಾಪುರ ಡಿಪ್ಪೊದಿಂದ ಕೇವಲ ಒಂದು ಬಸ್ ಮಾತ್ರ ಮೈಸೂರು ಮಾರ್ಗವಾಗಿ ಸಂಚರಿಸಿತು. ಹೊರ ಜಿಲ್ಲೆಯಿಂದ ಒಟ್ಟು 15 ಬಸ್ ಗಳು ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿತು. ಶಿವಮೊಗ್ಗ ಸೇರಿದಂತೆ ಕೆಲವು ಭಾಗಗಳಿಗೆ ಬಸ್ ಇಲ್ಲದೆ ಪ್ರಾಣಿಕರು ತೊಂದರೆ ಅನುಭವಿಸಿದರು.
ಉಡುಪಿ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ವಾರಾಂತ್ಯ ಕರ್ಫ್ಯೂ ಜಾರಿಯಾ ಗಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಎಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಜಿಲ್ಲೆಯಲ್ಲಿ ಒಟ್ಟು 9 ಚೆಕ್‌ಪೋಸ್ಟ್ ಮತ್ತು 16 ಪಿಕೆಟಿಂಗ್ ಪಾಯಿಂಟ್‌ಗಳನ್ನು ನಿರ್ಮಿಸಿ ವಾಹನ ತಾಪಸಣೆ ಮಾಡಲಾಗಿದೆ. ಕರ್ಫ್ಯೂ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಎಲ್ಲ ಕಡೆಗಳಲ್ಲಿಯೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
-ವಿಷ್ಣುವರ್ದನ್, ಎಸ್ಪಿ, ಉಡುಪಿ











