ಮದ್ಯದಂಗಡಿ ಬಂದ್: ಸ್ಯಾನಿಟೈಸರ್ ಸೇವಿಸಿ ಏಳು ಮಂದಿ ಕಾರ್ಮಿಕರು ಮೃತ್ಯು

ಯವತ್ಮಾಲ್ (ಮಹಾರಾಷ್ಟ್ರ): ಮುಂಬೈನಿಂದ 700 ಕಿಲೋಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ವಾಣಿ ಗ್ರಾಮದಲ್ಲಿ ವಾರಾಂತ್ಯದ ಲಾಕ್ ಡೌನ್ ನಿಂದಾಗಿ ಮದ್ಯ ಖರೀದಿಸಲು ಸಾಧ್ಯವಾಗದ ಕಾರಣ ಆಲ್ಕೋಹಾಲ್ ಆಧರಿತ ಹ್ಯಾಂಡ್ ಸ್ಯಾನಿಟೈಸರ್ ಕುಡಿದು ಏಳು ಕಾರ್ಮಿಕರು ಮೃತಪಟ್ಟಿದ್ದಾರೆ.
ಕಾರ್ಮಿಕರು ಮದ್ಯವನ್ನು ಖರೀದಿಸಲು ಬಯಸಿದ್ದರು. ಆದರೆ ಮದ್ಯದಂಗಡಿಗಳನ್ನು ಮುಚ್ಚಿದ್ದರಿಂದ ಅದು ಸಾಧ್ಯವಾಗಲಿಲ್ಲ. ತೀವ್ರ ಅಸ್ವಸ್ಥರಾಗಿದ್ದ ಕಾರ್ಮಿಕರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ತನಿಖೆ ನಡೆಸುವಂತೆ ಯವತ್ಮಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.
ಕೋವಿಡ್-19 ತಡೆಗಟ್ಟುವಿಕೆಗಾಗಿ ತಜ್ಞರು ಶಿಫಾರಸು ಮಾಡಿದ ಹ್ಯಾಂಡ್ ಸ್ಯಾನಿಟೈಸರ್ ಗಳಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಆಲ್ಕೋಹಾಲ್ ಇದೆ. ಅವು ಬಾಹ್ಯ ಬಳಕೆಗೆ ಮಾತ್ರ ಸೀಮಿತವಾಗಿದ್ದು, ಅದನ್ನು ಸೇವಿಸಿದರೆ ವಿಷಕಾರಿಯಾಗಿರುತ್ತವೆ.
ಮಹಾರಾಷ್ಟ್ರವು ದೇಶದಲ್ಲಿ ಅತ್ಯಂತ ಹೆಚ್ಚು ಕೋವಿಡ್ ಪೀಡಿತ ರಾಜ್ಯವಾಗಿದ್ದು, ಕಳೆದ ಹಲವು ವಾರಗಳಿಂದ ಪ್ರತಿದಿನ 50,000 ಕ್ಕೂ ಅಧಿಕ ಕೊರೋನವೈರಸ್ ಪ್ರಕರಣಗಳು ವರದಿಯಾಗುತ್ತಿವೆ.