ಸಿಂಗಾಪುರದಿಂದ ಆಮ್ಲಜನಕ ಕಂಟೇನರ್ ಗಳನ್ನು ಏರ್ ಲಿಫ್ಟ್ ಮಾಡಿದ ಐಎಎಫ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತದಲ್ಲಿ ತೀವ್ರವಾದ ಆಮ್ಲಜನಕದ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ (ಐಎಎಫ್) ಸಿಂಗಾಪುರದಿಂದ ಆಮ್ಲಜನಕ ಕಂಟೇನರ್ ಗಳನ್ನು ವಿಮಾನ ಮೂಲಕ ತರಲು ಆರಂಭಿಸಿದೆ. ದೇಶದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿದ್ದು, ಇದು ವಿವಿಧ ರಾಜ್ಯಗಳಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಗೆ ಕಾರಣವಾಗಿದೆ.
ನಾಲ್ಕು ಕಂಟೇನರ್ಗಳ ಮೊದಲ ಸೆಟ್ ಶನಿವಾರ ಸಂಜೆ ಪನಗಢ ಕ್ಕೆ ಇಳಿಯಲಿದೆ. ಮರುಪೂರಣದ ನಂತರ, ಅವುಗಳನ್ನು ದೇಶದ ವಿವಿಧ ಭಾಗಗಳಿಗೆ ಸಾಗಿಸಲಾಗುತ್ತದೆ.
"ಭಾರತೀಯ ವಾಯುಪಡೆಯ 1 ಸಿ -17 ಎಪ್ರಿಲ್ 24 ರಂದು ಮುಂಜಾನೆ 2 ಗಂಟೆಗೆ ಉತ್ತರಪ್ರದೇಶದ ಹಿಂಡನ್ ವಾಯುನೆಲದಿಂದ ಸಿಂಗಾಪುರದ ಚಾಂಗಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದು, ವಿಮಾನವು ಬೆಳಿಗ್ಗೆ 7: 45 ಕ್ಕೆ ಸಿಂಗಾಪುರಕ್ಕೆ ಆಗಮಿಸಿತು" ಎಂದು ಭಾರತೀಯ ವಾಯುಪಡೆ ತಿಳಿಸಿದೆ.
"ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕ್ಗಳ 4 ಕಂಟೇನರ್ ಗಳನ್ನು ಲೋಡ್ ಮಾಡಿದ ನಂತರ ಅದು ಸಿಂಗಾಪುರದಿಂದ ಹೊರಟು ಪನಗಢ ವಾಯುನೆಲೆಗೆ ಇಳಿಯಲಿದೆ. ಈ ಕಂಟೇನರ್ಗಳನ್ನು ಶನಿವಾರ ಸಂಜೆಯ ವೇಳೆಗೆ ವಿಮಾನದಿಂದ ಇಳಿಸಲಾಗುತ್ತದೆ”ಎಂದು ಐಎಎಫ್ ಹೇಳಿದೆ.
ಸಿಂಗಾಪುರವನ್ನು ಹೊರತುಪಡಿಸಿ, ಐಎಎಫ್ ತನ್ನ ಸಾರಿಗೆ ವಿಮಾನವನ್ನು ಯುಎಇಗೆ ಕಳುಹಿಸಲಿದೆ ಹಾಗೂ ದೇಶದಲ್ಲಿ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಆಮ್ಲಜನಕ ಟ್ಯಾಂಕರ್ಗಳನ್ನು ತರುತ್ತದೆ.







