ಉಪವಾಸ ವೃತದ ನಡುವೆ ಕೋವಿಡ್ ಸೋಂಕಿತರ ಸೇವೆಯಲ್ಲಿ ನಿರತರಾದ ಗರ್ಭಿಣಿ ನರ್ಸ್: ವ್ಯಾಪಕ ಪ್ರಶಂಸೆ
"ರಂಝಾನ್ ತಿಂಗಳಲ್ಲೇ ರೋಗಿಗಳ ಸೇವೆ ಮಾಡಲು ಅವಕಾಶ ದೊರಕಿದೆ"

ಸೂರತ್: ಕೋವಿಡ್ ಸಾಂಕ್ರಾಮಿಕದ ನಡುವೆಯೂ ಗುಜರಾತ್‍ನ ಸೂರತ್ ನಗರದ ನಾಲ್ಕು ತಿಂಗಳ ಗರ್ಭಿಣಿ ನರ್ಸ್ ಒಬ್ಬರು ರಮಝಾನ್ ತಿಂಗಳ ಉಪವಾಸವನ್ನು ಪಾಲಿಸಿಕೊಂಡು ಕೋವಿಡ್ ಆರೈಕೆ ಕೇಂದ್ರದಲ್ಲಿ ರೋಗಿಗಳಿಗೆ ನಿಸ್ಸ್ವಾರ್ಥ ಸೇವೆ ಸಲ್ಲಿಸಿ ಎಲ್ಲರಿಗೆ ಆದರ್ಶಪ್ರಾಯರಾಗಿದ್ದಾರೆ.
ನ್ಯಾನ್ಸಿ ಆಯೆಝಾ ಮಿಸ್ತ್ರಿ ಎಂಬ ಹೆಸರಿನ ಈ ನರ್ಸ್ ಪವಿತ್ರ ರಮಝಾನ್ ತಿಂಗಳನ್ನು ಆಚರಿಸುತ್ತಿರುವ ನಡುವೆಯೂ ಅತ್ಯಂತ ಜತನದಿಂದ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಕೋವಿಡ್ ಆರೈಕೆ ಕೇಂದ್ರದಲ್ಲಿ ಸೇವೆ ಸಲ್ಲಿಸುವುದರಿಂದ ಗರ್ಭಿಣಿಯಾಗಿರುವ ತನಗೆ ಎದುರಾಗಬಹುದಾದ ಸೋಂಕಿನ ಅಪಾಯವನ್ನು ಅರಿತಿರುವ ಹೊರತಾಗಿಯೂ ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲಿಸಿಕೊಂಡು ಆಕೆ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ.
ಸೂರತ್‍ನ ಅಲ್ತನ್ ಸಮುದಾಯ ಕೇಂದ್ರದಲ್ಲಿರುವ ಅಟಲ್ ಕೋವಿಡ್-19 ಕೇಂದ್ರದಲ್ಲಿ ಈಕೆ ಪ್ರತಿ ದಿನ ಎಂಟರಿಂದ ಹತ್ತು ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಆಕೆ ತಾನು ಆರೈಕೆ ಮಾಡುತ್ತಿರುವ ರೋಗಿಗಳ ಆಶೀರ್ವಾದ ಪಡೆಯುತ್ತಿದ್ದಾರೆ.
"ನನ್ನ ಹೊಟ್ಟೆಯಲ್ಲೊಂದು ಜೀವ ಬೆಳೆಯುತ್ತಿದೆ. ಆದರೆ ನನಗೆ ನನ್ನ ಕರ್ತವ್ಯ ಎಲ್ಲಕ್ಕಿಂತ ಮಿಗಿಲು. ದೇವರ ದಯೆಯಿಂದ ನನಗೆ ಪವಿತ್ರ ರಮಝಾನ್ ತಿಂಗಳಲ್ಲಿ ರೋಗಿಗಳ ಆರೈಕೆ ಮಾಡುವ ಅವಕಾಶ ದೊರಕಿದೆ" ಎಂದು ಆಕೆ ಹೇಳುತ್ತಾರೆ.
ಕಳೆದ ವರ್ಷದ ಕೋವಿಡ್ ಮೊದಲನೇ ಅಲೆಯ ವೇಳೆಯೂ ಆಕೆ ಇದೇ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದರು.







