ಉಡುಪಿ : ಮತ್ತೆ 400ರ ಗಡಿದಾಟಿದ ಹೊಸ ಕೊರೋನ ಸೋಂಕಿತರು
ಉಡುಪಿ : ಜಿಲ್ಲೆಯ ಕೊರೋನ ಸೋಂಕಿತರ ಸಂಖ್ಯೆ ಮತ್ತೆ 400ರ ಗಡಿದಾಟಿದೆ. ಶನಿವಾರ ಒಟ್ಟು 403 ಮಂದಿ ಹೊಸದಾಗಿ ಪಾಸಿಟಿವ್ ಬಂದಿದ್ದಾರೆ. ಹಾಗೆಯೇ 177 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆಯೂ ಇದೀಗ 1491ಕ್ಕೆ ಏರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ 403 ಮಂದಿಯಲ್ಲಿ 233 ಮಂದಿ ಪುರುಷರಾದರೆ, 170 ಮಂದಿ ಮಹಿಳೆಯರು. ಇವರಲ್ಲಿ 208 ಮಂದಿ ಉಡುಪಿ ತಾಲೂಕಿನವರಾದರೆ, 143 ಮಂದಿ ಕುಂದಾಪುರ ಹಾಗೂ 48 ಮಂದಿ ಕಾರ್ಕಳ ತಾಲೂಕಿ ನವರು. ಹೊರಜಿಲ್ಲೆಯಿಂದ ಬಂದ ನಾಲ್ವರು ಸಹ ಇಂದು ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ ಎಂದು ಡಾ. ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಹೆಚ್ಚೆಚ್ಚು ಪಾಸಿಟಿವ್ ಬರುತ್ತಿರುವುದು ಕಂಡುಬಂದಿದೆ. ಉಡುಪಿ ತಾಲೂಕಿನಲ್ಲಿ 84, ಕುಂದಾಪುರ ತಾಲೂಕಿನಲ್ಲಿ 67 ಹಾಗೂ ಕಾರ್ಕಳ ತಾಲೂಕಿನಲ್ಲಿ 24 ಮಂದಿ ಪ್ರಾಥಮಿಕ ಸಂಪರ್ಕಿತರು ಇಂದು ಪಾಸಿಟಿವ್ ಬಂದಿದ್ದಾರೆ. ಅದೇ ರೀತಿ ಒಟ್ಟು ಸೋಂಕಿತರಲ್ಲಿ 103 ಮಂದಿ ಐಎಲ್‌ಐ ಪ್ರಕರಣದವರು ಎಂದು ಡಾ.ಸೂಡ ವಿವರಿಸಿದರು.
ಮಣಿಪಾಲ ಕೆಎಂಸಿ ಕ್ಯಾಂಪಸ್‌ನಲ್ಲಿ 27 ಮಂದಿ, ಹಿರಿಯಡ್ಕ ಬಿಸಿಎಂ ಹಾಸ್ಟೆಲ್‌ನ 7 ಮಂದಿ ಪಾಸಿಟಿವ್ ಬಂದಿದ್ದಾರೆ. ಅದೇ ರೀತಿ ಉಡುಪಿ ತಾಲೂಕಿನ 9, ಕುಂದಾಪುರ ತಾಲೂಕಿನ 6 ಹಾಗೂ ಕಾರ್ಕಳ ತಾಲೂಕಿನ ಇಬ್ಬರು ಪ್ರಯಾಣ ಕಾರಣಕ್ಕಾಗಿ ಪರೀಕ್ಷೆಗೊಳಗಾದಾಗ ಪಾಸಿಟಿವ್ ಬಂದಿದ್ದಾರೆ. ಉತ್ತರ ಕನ್ನಡ, ದಕ್ಷಿಣ ಕನ್ನಡದ ಇಬ್ಬರು ಹಾಗೂ ಚಿಕ್ಕಮಗಳೂರಿನ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ಶುಕ್ರವಾರ 177 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 26,757 ಕ್ಕೇರಿದೆ. ನಿನ್ನೆ ಜಿಲ್ಲೆಯ 3421 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 403 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 28,442 ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,84,891 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಇಂದು ಅಧಿಕೃತವಾಗಿ ಕೊರೋನ ದಿಂದ ಯಾರೂ ಮೃತಪಟ್ಟಿಲ್ಲ. ಈವರೆಗೆ ಕೊರೋನದಿಂದ ಮೃತಪಟ್ಟವರ ಸಂಖ್ಯೆ 194 ಆಗಿದೆ.







