ಕೊರೋನ ಹಳ್ಳಿಗಳಿಗೆ ಹರಡದಂತೆ ತಡೆಯಬೇಕಾಗಿದೆ: ಸ್ಥಳೀಯಾಡಳಿತಗಳಿಗೆ ಪ್ರಧಾನಿ ಕರೆ
"ಕೋವಿಡ್-19 ಒಡ್ಡಿರುವ ಸವಾಲು ಕಳೆದ ವರ್ಷಕ್ಕಿಂತಲೂ ಬೃಹತ್ತಾಗಿದೆ"

ಹೊಸದಿಲ್ಲಿ, ಎ.24: ಭಾರತವು ಈಗ, ಕಳೆದ ವರ್ಷಕ್ಕಿಂತಲೂ ಬೃಹತ್ತಾದ ಕೋವಿಡ್-19 ಸವಾಲನ್ನು ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮಾರಣಾಂತಿಕ ಸೋಂಕು ರೋಗವು ಹಳ್ಳಿಗಳಿಗೆ ಅಪ್ಪಳಿಸುವುದನ್ನು ತಡೆಯಲು ‘ಎಲ್ಲಾ ರೀತಿಯಿಂದಲೂ’ಪ್ರಯತ್ನಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಪಂಚಾಯತ್ ರಾಜ್ ದಿವಸ್ ಅಂಗವಾಗಿ ಶನಿವಾ ವಿಡಿಯೋಕಾನ್ಫರೆನ್ಸ್ ಮೂಲಕ ನಡೆದ ಸಮಾರಂಭದಲ್ಲಿ ಪ್ರಧಾನಿಯವರು ‘ಸ್ವಾಮಿತ್ವ’ಯೋಜನೆಯಡಿ ಇ-ಪ್ರಾಪರ್ಟಿ ಕಾರ್ಡ್ಗಳ ವಿತರಣೆಗೆ ಚಾಲನೆ ನೀಡಿದ ಬಳಿಕ ಮಾತನಾಡುತ್ತಿದ್ದರು. ಕಳೆದ ವರ್ಷ ಕೊರೋನ ಸಾಂಕ್ರಾಮಿಕವು ಗ್ರಾಮೀಣ ಪ್ರದೇಶಗಳಿಗೆ ಹರಡುವುದನ್ನು ತಡೆಯಲಾಗಿತ್ತು. ಸ್ಥಳೀಯ ನಾಯಕರಿಗೆ ಈ ವಿಷಯವಾಗಿ ಉತ್ತಮ ಅನುಭವ ಹಾಗೂ ಜ್ಞಾನವಿರುವುದರಿಂದ ಈ ಸಲವೂ ಆ ಸಾಧನೆಯನ್ನು ಪುನರಾವರ್ತಿಸಬಹುದಾಗಿದೆ ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದರು.
ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳಿಗೂ ಕೂಡಾ ಕಾರ್ಯಕ್ರಮದೊಂದಿಗೆ ಸಂಪರ್ಕಿಸಲ್ಪಟ್ಟಿದ್ದರು.
‘‘ಒಂದು ವೇಳೆ ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ಯಾರಾದರೂ ಜಯಶಾಲಿಗಳಾದಲ್ಲಿ, ಖಂಡಿತವಾಗಿಯೂ ಅದರ ಶ್ರೇಯಸ್ಸು ಭಾರತದ ಹಳ್ಳಿಗಳಿಗೆ ಸಲ್ಲುತ್ತದೆ ಎಂಬ ಭರವಸೆ ನನಗಿದೆ. ಈ ಹಳ್ಳಿಗಳ ಜನರು, ದೇಶಕ್ಕೆ ಹಾಗೂ ಜಗತ್ತಿಗೆ ದಾರಿ ತೋರಿಸಲಿದಾರೆ’’ ಎಂದು ಪ್ರಧಾನಿ ತಿಳಿಸಿದರು.
‘ದವಾಯಿ ಭಿ, ಕಡಾಯಿ ಭಿ’ (ಔಷಧಿಯೂ ಬೇಕು ಮತ್ತು ಎಚ್ಚರಿಕೆಯೂ ಬೇಕು) ಎಂಬುದು ಪಂಚಾಯತ್ಗಳ ಸದ್ಯದ ಮಂತ್ರವಾಗಿರಬೇಕು ಎಂದು ಅವರು ಒತ್ತಿ ಹೇಳಿದರು.
ಕೇಂದ್ರ ಸರಕಾರವು ಜಾರಿಗೊಳಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಹಳ್ಳಿಗಳು ಅನುಸರಿಸಬೇಕು ಹಾಗೂ ಜನರು ಲಸಿಕೆಯನ್ನು ಪಡೆಯಬೇಕು ಎಂದು ಅವರು ಕರೆ ನೀಡಿದರು.
ಕೋರೋನ ಹಾವಳಿಯ ಸಂದರ್ಭದಲ್ಲಿ ಬಡವರು ಆಹಾರವನ್ನು ಪಡೆಯುವುದಕ್ಕೆ ನೆರವಾಗುವುದಕ್ಕಾಗಿ, ತನ್ನ ಸರಕಾರವು ಅವರಿಗೆ ಮೇ ಹಾಗೂ ಜೂನ್ನಲ್ಲಿ ಉಚಿತ ಪಡಿತರವನ್ನು ಒದಗಿಸಲು ನಿರ್ಧರಿಸಿದೆ. ಇದರಿಂದಾಗಿ 80 ಕೋಟಿಗೂ ಅಧಿಕ ಮಂದಿಗೆ ಪ್ರಯೋಜನವಾಗಲಿದೆ ಮತ್ತು ಸರಕಾರದ ಬೊಕ್ಕಸಕ್ಕೆ 26 ಸಾವಿರ ಕೋಟಿ ರೂ.ಗಳ ಹೊರೆ ಬೀಳಲಿದೆ ಎಂದು ಪ್ರಧಾನಿ ತಿಳಿಸಿದರು. ಕಾರ್ಯಕ್ರಮದಲ್ಲಿ ದೇಶಾದ್ಯಂತ ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಲಾಯಿತು.
ಪ್ರಾರಂಭದಲ್ಲಿ 4.09 ಲಕ್ಷ ಆಸ್ತಿ ಮಾಲಕರಿಗೆ ಇ-ಪ್ರಾಪರ್ಟಿ ಕಾರ್ಡ್ ಗಳನ್ನು ನೀಡಲಾಗುವುದು ಎಂದು ಪ್ರಧಾನಿ ತಿಳಿಸಿದರು. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ 2021ರ ಸಾಲಿನ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಪಂಚಾಯತ್ ಪುರಸ್ಕಾರ ಪ್ರದಾನ
224 ಪಂಚಾಯತ್ ಗಳಿಗೆ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ್, 30 ಗ್ರಾಮ ಪಂಚಾಯತ್ ಗಳಿಗೆ ನಾನಾಜಿ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರ, 29 ಗ್ರಾಮ ಪಂಚಾಯತ್ ಗಳಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನಾ ಪುರಸ್ಕಾರ, 30 ಗ್ರಾಮ ಪಂಚಾಯತ್ಗಳಿಗೆ ಮಕ್ಕಳಸ್ನೇಹಿ ಗ್ರಾಮ ಪಂಚಾಯತ್ ಪ್ರಶಸ್ತಿ ಹಾಗೂ 12 ರಾಜ್ಯಗಳಿಗೆ ಇ-ಪಂಚಾಯತ್ ಪುರಸ್ಕಾರಗಳನ್ನು ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಪ್ರದಾನಿಸಲಾಯಿತು.
ಪ್ರಶಸ್ತಿಗಳ ಹಣವು 5 ಲಕ್ಷ ರೂ.ಗಳಿಂದ ಹಿಡಿದು 50 ಲಕ್ಷ ರೂ.ವರೆಗಿದ್ದು, ಪ್ರಧಾನಿಯವರು ಕಂಪ್ಯೂಟರ್ ಗುಂಡಿಯನ್ನು ಒತ್ತುವ ಮೂಲಕ ಪುರಸ್ಕೃತ ಅದನ್ನು ಹಸ್ತಾಂತರಿಸಿದರು.







