ಕೋವಿಡ್ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ: ರೆಡ್‍ಕ್ರಾಸ್ ಮನವಿ
ಬೆಂಗಳೂರು, ಎ.24: ಕೇಂದ್ರ ಸರಕಾರ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ಲಸಿಕೆಯನ್ನು ನೀಡಲು ತೀರ್ಮಾನಿಸಿದೆ. ಹೀಗಾಗಿ ಸ್ವಯಂಪ್ರೇರಿತ ರಕ್ತದಾನಿಗಳು ರಕ್ತದಾನ ಮಾಡಿ ನಂತರ ಕೋವಿಡ್ ಲಸಿಕೆ ತೆಗೆದುಕೊಳ್ಳಬೇಕೆಂದು ರಾಜ್ಯ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ನಾಗಣ್ಣ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಷ್ಟ್ರೀಯ ರಕ್ತಚಾಲನ ಪರಿಷತ್‍ನ(ಎನ್‍ಬಿಟಿಸಿ) ನಿರ್ದೇಶನದಂತೆ ಮೊದಲ ಲಸಿಕೆಯನ್ನು ತೆಗೆದುಕೊಂಡ ನಂತರ 28 ದಿನಗಳ ಕಾಲ ರಕ್ತದಾನ ಮಾಡಲು ಆಗುವುದಿಲ್ಲ. ಅದೇ ರೀತಿ ಎರಡನೇ ಲಸಿಕೆಯನ್ನು ತೆಗೆದುಕೊಂಡ ನಂತರ 28 ದಿನಗಳ ಕಾಲ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವವರು, ಡಯಾಲಿಸಿಸ್, ಅಪಘಾತ, ಹೃದಯ ಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ ವಿಧಾನಗಳು ಮತ್ತು ಮುಂತಾದ ತುರ್ತು ಸಂದರ್ಭಗಳಲ್ಲಿ ರಕ್ತದ ಅನಿವಾರ್ಯತೆ ಇರುತ್ತದೆ. ಹೀಗಾಗಿ ಸ್ವಯಂಪ್ರೇರಿತ ರಕ್ತದಾನಿಗಳು ಈ ಅಂಶವನ್ನು ಗಮನದಲ್ಲಿಟ್ಟು, ಕೋವಿಡ್ ಲಸಿಕೆ ಪಡೆಯುವ ಮುನ್ನ ರಕ್ತದಾನಕ್ಕೆ ಮುಂದಾಗಬೇಕೆಂದು ಅವರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಕೋವಿಡ್ ಪರಿಣಾಮವಾಗಿ ಮತ್ತು ಪ್ರಸ್ತುತ ವಾರಂತ್ಯದ ಕರ್ಫ್ಯೂ ಹಾಗೂ ಸರಕಾರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ರಕ್ತದಾನ ಶಿಬಿರಗಳು ಹಾಗೂ ರಕ್ತದಾನಿಗಳು ಸಕಾಲದಲ್ಲಿ ರಕ್ತದಾನ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಯುವಜನತೆ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಂಡು ಮುಂದೆ ಸಂಭವಿಸಬಹುದಾದ ರಕ್ತದ ಕೊರತೆಯನ್ನು ನೀಗಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಸ್ವಯಂಪ್ರೇರಿತ ರಕ್ತದಾನ ಮಾಡುವವರು ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ರೆಡ್‍ಕ್ರಾಸ್ ಕರ್ನಾಟಕ ರಾಜ್ಯ ಶಾಖೆಗೆ ಬಂದು ರಕ್ತದಾನ ಮಾಡಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ 080-22268435, 9035068435 ಸಂಖ್ಯೆಗೆ ಸಂಪರ್ಕಿಸಬಹುದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







