ಟೀಕೆಗಳ ಬಳಿಕ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ನ ಬೆಲೆಯನ್ನು 150 ರೂ. ಇಳಿಸಿದ ಕೇಂದ್ರ

ಹೊಸದಿಲ್ಲಿ, ಎ. 24: ಕೇಂದ್ರ ಸರಕಾರ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಕೋವಿಡ್-19 ಲಸಿಕೆ ಕೋವಿಶೀಲ್ಡ್ ಅನ್ನು ಪ್ರತಿ ಡೋಸ್ಗೆ 150 ರೂಪಾಯಿಗೆ ಖರೀದಿಸಲಿದೆ ಎದು ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.
ಇದರ ಅರ್ಥ ಕೊರೋನ ಲಸಿಕೆ ಕೇಂದ್ರ ಸರಕಾರದ ಯಾವುದೇ ಚಿಕಿತ್ಸಾ ಕೇಂದ್ರಗಳಲ್ಲಿ ಅಗ್ಗದ ಬೆಲೆಯಲ್ಲಿ ದೊರೆಯಲಿದೆ. ಆದರೆ, ರಾಜ್ಯ ಸರಕಾರದ ಚಿಕಿತ್ಸಾ ಕೇಂದ್ರಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜನರು ಹೆಚ್ಚು ಹಣ ಪಾವತಿಸಬೇಕಾಗಬಹುದು.
ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಮಾರಾಟ ಮಾಡುವ ಯಾವುದೇ ಲಸಿಕೆಯನ್ನು ಉಚಿತವಾಗಿ ಒದಗಿಸಲಾಗುವುದು ಎಂದು ಸಚಿವಾಲಯದ ಟ್ವೀಟ್ ಹೇಳಿದೆ. ಆದರೆ, ನೂತನ ನೀತಿ ಅಡಿಯಲ್ಲಿ ಉತ್ಪಾದಕರಿಂದ ನೇರವಾಗಿ ಲಸಿಕೆಯ ಡೋಸ್ ಖರೀದಿ ಸಂದರ್ಭ ರಾಜ್ಯ ಸರಕಾರಗಳು ಹಾಗೂ ಖಾಸಗಿ ಆಸ್ಪತ್ರೆಗಳು ಅತ್ಯಧಿಕ ಬೆಲೆ ನೀಡಬೇಕಾದ ಬಗೆಗಿನ ಯಾವುದೇ ವಿಷಯವನ್ನು ಈ ಹೇಳಿಕೆ ತಿಳಿಸಿಲ್ಲ. ಕೇಂದ್ರದ ನೂತನ ನಿಯಮಗಳ ಪ್ರಕಾರ ರಾಜ್ಯ ಸರಕಾರಗಳು ಕೇಂದ್ರ ಸರಕಾರದಿಂದ ಲಸಿಕೆಯ ಪಾಲು ಪಡೆಯಲಿವೆ. ಆದರೆ, ಹೆಚ್ಚಿನ ಡೋಸ್ ಪಡೆಯಲು ಲಸಿಕೆ ಉತ್ಪಾದಕರಿಂದ ನೇರವಾಗಿ ಖರೀದಿಸುವ ಅಗತ್ಯತೆ ಇದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ ಲಸಿಕೆಯ ಹೊಸ ಬೆಲೆಯ ಕುರಿತು ಮಾತುಕತೆ ನಡೆಸುವಂತೆ ನರೇಂದ್ರ ಮೋದಿ ಸರಕಾರವನ್ನು ಆಗ್ರಹಿಸಿ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಮಾಡಿದ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಆರೋಗ್ಯ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ.
ಕೋವಿಶೀಲ್ಡ್ಗೆ ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ, ಸೌದಿ, ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ಪಾವತಿಸುವ ಬೆಲೆಗಿಂತ ಭಾರತ ನೀಡುವ ಬೆಲೆ ಹೆಚ್ಚಾಗಿದೆ. ಮೇಡ್ ಇನ್ ಇಂಡಿಯಾ ಹಾಗೂ ಭಾರತದಲ್ಲಿ ಅತ್ಯಧಿಕ ಬೆಲೆ ? ಲಸಿಕೆಗೆ 150 ರೂಪಾಯಿ ಬೆಲೆ ನಿಗದಿಪಡಿಸಿದರೂ ಲಾಭ ಇದೆ ಎಂದು ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಿಳಿಸಿದೆ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದರು.