ಆಮ್ಲಜನಕ ಕೊರತೆ: ನವೆಂಬರ್‌ನಲ್ಲೇ ಸರಕಾರವನ್ನು ಎಚ್ಚರಿಸಿದ್ದ ಸಂಸದೀಯ ಸಮಿತಿ

ಹೊಸದಿಲ್ಲಿ, ಎ.25: ಭಾರತಕ್ಕೆ ಕೊರೋನ ವೈರಸ್‌ನ ಎರಡನೇ ಅಲೆ ಅಪ್ಪಳಿಸುವ ಕೆಲ ತಿಂಗಳುಗಳ ಮುನ್ನವೇ ಅಂದರೆ ಕಳೆದ ನವೆಂಬರ್ ತಿಂಗಳಲ್ಲೇ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆಗೆ ಹಾಸಿಗೆ ಹೆಚ್ಚಿಸುವಂತೆ ಮತ್ತು ಆಮ್ಲಜನಕ ಉತ್ಪಾದನೆಯನ್ನು ಹೆಚ್ಚಿಸುವಂತೆ ಸಂಸದೀಯ ಸಮಿತಿಯು ಕೇಂದ್ರ ಸರಕಾರಕ್ಕೆ ಸಲಹೆ ನೀಡಿತ್ತು.
ಆಮ್ಲಜನಕ ಸಿಲಿಂಡರ್‌ಗಳ ಗರಿಷ್ಠ ಬೆಲೆಗೆ ಮಿತಿ ನಿಗದಿಪಡಿಸುವಂತೆಯೂ ಸಮಾಜವಾದಿ ಪಕ್ಷದ ಮುಖಂಡ ರಾಮ್‌ಗೋಪಾಲ್ ಯಾದವ್ ನೇತೃತ್ವದ ಆರೋಗ್ಯ ಸ್ಥಾಯಿ ಸಮಿತಿ, ರಾಷ್ಟ್ರೀಯ ಔಷಧಗಳ ಬೆಲೆನಿಗದಿ ಪ್ರಾಧಿಕಾರಕ್ಕೆ ಸೂಚನೆ ನೀಡಿ, ಆಮ್ಲಜನಕ ಲಭ್ಯವಾಗುವಂತೆ ಹಾಗೂ ಕೈಗೆಟುಕುವಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿತ್ತು.
ಆಸ್ಪತ್ರೆಗಳಲ್ಲಿನ ಅಧಿಕ ಬೇಡಿಕೆಗೆ ಅನುಗುಣವಾಗಿ ಪೂರೈಕೆಯನ್ನು ಖಾತರಿಪಡಿಸಲು ಸೂಕ್ತ ಪ್ರಮಾಣದಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆಯೂ ಸಲಹೆ ಮಾಡಿತ್ತು. ಈ ಸಂಬಂಧ ಸಮಿತಿ ಕಳೆದ ನವೆಂಬರ್‌ನಲ್ಲೇ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲಿ ಸರಕಾರಿ ಆಸ್ಪತ್ರೆಗಳಲ್ಲಿ ಇರುವ ಹಾಸಿಗೆಗಳ ಸಂಖ್ಯೆ ತೀರಾ ಕಡಿಮೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು.
ಆಸ್ಪತ್ರೆ ಬೆಡ್ ಕೊರತೆ ಮತ್ತು ವೆಂಟಿಲೇಟರ್‌ಗಳ ಕೊರತೆ, ಸಾಂಕ್ರಾಮಿಕವನ್ನು ನಿಯಂತ್ರಿಸುವ ಕ್ಷಮತೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. "ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ರೋಗಿಗಳು ಅಲೆದಾಡುತ್ತಿರುವ ಚಿತ್ರಣ ಭಯಾನಕ. ಬೆಡ್ ಕೊರತೆಯಿಂದಾಗಿ ಆಸ್ಪತ್ರೆಗಳಿಗೆ ಬಂದ ರೋಗಿಗಳನ್ನು ಹಿಂದೆ ಕಳುಹಿಸುತ್ತಿರುವುದು ಸಾಮಾನ್ಯ. ಆಮ್ಲಜನಕ ಸಿಲಿಂಡರ್‌ಗಳನ್ನು ಹಿಡಿದುಕೊಂಡು ರೋಗಿಗಳು ಆಸ್ಪತ್ರೆ ಬೆಡ್ ಹುಡುಕಾಟದಲ್ಲಿ ಅತ್ತಿಂದಿತ್ತ ಅಲೆದಾಡುತ್ತಿರುವ ಪಾಟ್ನಾ ಎಐಐಎಂಎಸ್‌ನ ಚಿತ್ರಣ ಇದಕ್ಕೆ ಸಾಕ್ಷಿ" ಎಂದು ಉಲ್ಲೇಖಿಸಿತ್ತು.