ದೇಶದಲ್ಲಿ 3.5 ಲಕ್ಷದ ಗಡಿ ತಲುಪಿದ ಕೋವಿಡ್ ದೈನಿಕ ಪ್ರಕರಣ

ಹೊಸದಿಲ್ಲಿ, ಎ.25: ದೇಶದಲ್ಲಿ ಸತತ ನಾಲ್ಕನೇ ದಿನ ಮೂರು ಲಕ್ಷಕ್ಕೂ ಅಧಿಕ ದೈನಿಕ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಅಂತೆಯೇ ಸತತ ಐದನೇ ದಿನ 2,000ಕ್ಕೂ ಅಧಿಕ ಸೋಂಕಿತರು ಮೃತಪಟ್ಟಿದ್ದಾರೆ.
ಶನಿವಾರ ದೇಶಲ್ಲಿ 3.49 ಲಕ್ಷ ಪ್ರಕರಣಗಳು ಸೇರ್ಪಡೆಯಾಗಿದ್ದು, 2760 ಮಂದಿ ಜೀವ ಕಳೆದುಕೊಂಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ದೇಶದಲ್ಲಿ 10 ಲಕ್ಷಕ್ಕೂ ಅಧಿಕ ಹೊಸ ಪ್ರಕರಣ ಸೇರ್ಪಡೆಯಾಗಿದ್ದರೆ, 7,500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ವಿಶ್ವಾದ್ಯಂತ ಸೋಂಕಿನಿಂದ ಬಾಧಿತವಾಗಿರುವ ದೇಶಗಳ ಪೈಕಿ ಅಮೆರಿಕ ಮಾತ್ರ ಒಂದೇ ದಿನ 50 ಸಾವಿರಕ್ಕಿಂತ ಅಧಿಕ ಪ್ರಕರಣಗಳನ್ನು ಕಂಡಿದೆ. ಅಮೆರಿಕದಲ್ಲಿ 63,206 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಭಾರತಕ್ಕೆ ಹಾಗೂ ಅಮೆರಿಕಕ್ಕೆ ಅಜಗಜಾಂತರ ವ್ಯತ್ಯಾಸವಿದೆ.
ಭಾರತದ ನೆರೆ ರಾಷ್ಟ್ರಗಳಲ್ಲಿ ಕೂಡಾ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪಾಕಿಸ್ತಾನದಲ್ಲಿ 5,870 ಹೊಸ ಪ್ರಕರಣಗಳು ವರದಿಯಾಗಿದ್ದರೆ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದಲ್ಲಿ ಕ್ರಮವಾಗಿ 3,629, 2,449 ಮತ್ತು 969 ಪ್ರಕರಣಗಳು ಸೇರ್ಪಡೆಯಾಗಿವೆ.
ಎಪ್ರಿಲ್ 6ರಿಂದೀಚೆಗೆ ದೇಶದಲ್ಲಿ ಪ್ರತಿದಿನ ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಅಂತೆಯೇ ಎಪ್ರಿಲ್ 6ರ ಬಳಿಕ ಸಾವಿನ ಸಂಖ್ಯೆ ಕೂಡಾ 600ಕ್ಕಿಂತ ಕಡಿಮೆಯಾಗಿಲ್ಲ. ಈ ನಡುವೆ ಸಾವಿನ ಸಂಖ್ಯೆ ಶನಿವಾರ 2,700ರ ಗಡಿ ದಾಟಿದೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಅಂದರೆ 67,160 ಪ್ರಕರಣಗಳು ವರದಿಯಾಗಿದ್ದರೆ, ಎರಡನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ ಒಂದೇ ದಿನ 38,055 ಪ್ರಕರಣಗಳು ಸೇರ್ಪಡೆಯಾಗಿವೆ. ಕರ್ನಾಟಕ, ಕೇರಳ ಮತ್ತು ದಿಲ್ಲಿಯಲ್ಲೂ 20 ಸಾವಿರಕ್ಕಿಂತ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ.
ಮಹಾರಾಷ್ಟ್ರದಲ್ಲಿ 676 ಮಂದಿ ಹಾಗೂ ದಿಲ್ಲಿಯಲ್ಲಿ 357 ಮಂದಿ ಸೋಂಕಿಗೆ ಶನಿವಾರ ಬಲಿಯಾಗಿದ್ದಾರೆ. ಕೋವಿಡ್-19 ಸೋಂಕಿನಿಂದ ಮೃತಪಟ್ಟ ಜನಪ್ರತಿನಿಧಿಗಳ ಸಾಲಿಗೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕಿ ಕಲಾವತಿ ಭೂರಿಯಾ ಹೊಸ ಸೇರ್ಪಡೆ. ಮೊದಲ ಬಾರಿಯ ಶಾಸಕಿಯಾಗಿರುವ ಇವರು ಹಿರಿಯ ಕಾಂಗ್ರೆಸ್ ಮುಖಂಡ ಕಾಂತಿಲಾಲ್ ಭೂರಿಯಾ ಅವರ ಸೊಸೆ.