"ನನ್ನ ಸಹೋದರನಿಗೆ ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಸಿಕ್ಕಿಲ್ಲ, ಜನಸಾಮಾನ್ಯರ ಪಾಡೇನು?"
ಆರೆಸ್ಸೆಸ್ ಮುಖವಾಣಿಯ ಮಾಜಿ ಸಂಪಾದಕ, ಬಿಜೆಪಿ ಮಾಜಿ ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಟ್ವೀಟ್

ಹೊಸದಿಲ್ಲಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಕ್ಸಿಜನ್ ಮತ್ತು ಇತರ ಅಗತ್ಯ ಆರೋಗ್ಯ ವ್ಯವಸ್ಥೆಗಳನ್ನು ಒದಗಿಸಲು ಪರದಾಟ ನಡೆಸುತ್ತಿರುವಂತೆಯೇ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಈ ನಡುವೆ ಆಸ್ಪತ್ರೆಗಳಲ್ಲಿ ಬೆಡ್ ಗಳು ಅಲಭ್ಯವಾಗಿರುವ ಕುರಿತು ಬಿಜೆಪಿ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಆರೆಸ್ಸ್ ನ ಮುಖವಾಣಿ ಪಾಂಚಜನ್ಯದ ಮಾಜಿ ಸಂಪಾದಕ ತರುಣ್ ವಿಜಯ್ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದ ಅವರು, "91ರ ಹರೆಯದ ನನ್ನ ಹಿರಿಯ ಸಹೋದರನನ್ನು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಪ್ಲಾಸ್ಮಾ ವ್ಯವಸ್ಥೆ ಇರಲಿಲ್ಲ. ಆಕ್ಸಿಜನ್ ಸಿಲಿಂಡರ್ ಕೂಡಾ ಇರಲಿಲ್ಲ. ನೀವು ಮನೆಗೆ ಕರೆದುಕೊಂಡು ಹೋಗಿ ಎಂದು ಡಾಕ್ಟರ್ ಹೇಳಿದ್ದಾರೆ. ನಾವು ಎಲ್ಲಿಗೆ ತಲುಪುತ್ತಿದ್ದೇವೆ? ಯಾವುದೇ ಸಂಬಂಧಗಳಿಲ್ಲದ, ಯಾವುದೇ ಪ್ರಭಾವಿ ವ್ಯಕ್ತಿಗಳ ಪರಿಚಯ ಇರದ ಜನಸಾಮಾನ್ಯರು ಏನು ಮಾಡಬೇಕು?" ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಟ್ವಿಟರ್ ಬಳಕೆದಾರರೋರ್ವರು, "ನೀವು ಮೊದಲು ಹಿಂದೂ-ಮುಸ್ಲಿಂ ಎಂಬ ವರ್ಗೀಕರಣ ನಡೆಸಿ ರಾಜಕಾರಣ ಮಾಡುವುದನ್ನು ನಿಲ್ಲಿಸಿ. ಈ ಬೇಧಭಾವಗಳೇ ನಮ್ಮನ್ನು ಇಂತಹಾ ಪರಿಸ್ಥಿತಿಗೆ ತಳ್ಳುತ್ತಿದೆ. ಮೊದಲು ಮಾನವರಾಗಬೇಕು. ವೈರಸ್ ಗಳು ಮನುಷ್ಯ ಯಾವ ಧರ್ಮಕ್ಕೆ ಸೇರಿದ್ದಾನೆಂದು ವರ್ಗೀಕರಣ ಮಾಡುವುದಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.