ರವಿವಾರವೂ ವಾರಾಂತ್ಯ ಕರ್ಫ್ಯೂಗೆ ಉತ್ತಮ ಸ್ಪಂದನೆ: ಉಡುಪಿಯಲ್ಲಿ ಜನಜೀವನ ಸ್ತಬ್ಧ

ಉಡುಪಿ, ಎ.25: ಕೊರೋನ ಎರಡನೆ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಘೋಷಿಸಿರುವ ವಾರಾಂತ್ಯದ ಕರ್ಫ್ಯೂಗೆ ರವಿವಾರವೂ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಜನಜೀವನ ಸಂಪೂರ್ಣ ಸ್ತಬ್ಧಗೊಂಡಿತ್ತು.
ಬೆಳಗ್ಗೆ 10ಗಂಟೆಗೆ ಎಲ್ಲ ಅಂಗಡಿಗಳು ಬಂದ್ ಆಗಲಿರುವುದರಿಂದ ತರಕಾರಿ, ದಿನಸಿ, ಹಾಲಿನ ಅಂಗಡಿಗಳಲ್ಲಿ ಜನ ಮುಗಿ ಬಿದ್ದು ಅಗತ್ಯ ವಸ್ತು ಗಳನ್ನು ಖರೀದಿಸಿದರು. ಶನಿವಾರಗಿಂತ ರವಿವಾರ ಹೆಚ್ಚಿನ ವ್ಯಾಪಾರ ನಡೆದಿದೆ ಎಂದು ತರಕಾರಿ ವರ್ತಕರು ತಿಳಿಸಿದ್ದಾರೆ. ಜಿಲ್ಲೆಯ ನಗರ, ಪೇಟೆಗಳಲ್ಲಿ ಜನ ಹಾಗೂ ವಾಹನ ಸಂಚಾರ ಬಹಳಷ್ಟು ವಿರಳವಾಗಿರುವುದು ಕಂಡುಬಂತು.
ಕರ್ಫ್ಯೂ ಹಿನ್ನೆಲೆಯಲ್ಲಿ ಸಂತೆಕಟ್ಟೆಯ ಸಂತೆ ರದ್ದು ಮಾಡಲಾಗಿತ್ತು. ಆದರೂ ಕೆಲವು ವ್ಯಾಪಾರಿಗಳು ರಸ್ತೆಯ ಬದಿಯಲ್ಲಿ ತರಕಾರಿ ಮಾರಾಟ ಮಾಡಿರುವುದು ಕಂಡುಬಂದಿದೆ. ಸಾರ್ವಜನಿಕರು ರಸ್ತೆಯಲ್ಲಿ ನಿಂತು ವಸ್ತುಗಳನ್ನು ಖರೀದಿಸಿ ದರು. ಕಳೆದ ಎರಡು ದಿನಗಳಲ್ಲಿ ನಗರದ ಸಗಟು ವ್ಯಾಪಾರಿಗಳು ಅಂಗಡಿ ತೆರೆಯದ ಹಿನ್ನೆಲೆಯಲ್ಲಿ ಸಣ್ಣ ಸಣ್ಣ ದಿನಸಿ ಅಂಗಡಿಗಳಲ್ಲಿ ಎಣ್ಣೆ ಸೇರಿದಂತೆ ಕೆಲವೊಂದು ಅಗತ್ಯ ವಸ್ತುಗಳ ಕೊರತೆ ಕಂಡುಬಂತು.
ಇಂದು ಕೂಡ ಖಾಸಗಿ ಬಸ್ ಓಡಿಸಲು ಅನುಮತಿ ಇದ್ದರೂ ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಪ್ರಯಾಣಿಕರಿಲ್ಲದ ಕಾರಣ ಉಡುಪಿ ಕೆಎಸ್‌ಆರ್‌ಟಿಸಿ ಡಿಪೋದಿಂದ ಇಂದು ಯಾವುದೇ ಬಸ್ ಓಡಾಟ ನಡೆಸಿಲ್ಲ. ಅದೇ ರೀತಿ ಹೊರ ಜಿಲ್ಲೆ ಗಳಿಂದಲೂ ಬಸ್ ಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಂದಾಪುರ ಡಿಪೋದಿಂದ ಇಂದು ಬೆಳಗ್ಗೆ ಬೆಂಗಳೂರು ಮತ್ತು ಕುಂದಾಪುರ - ಭಟ್ಕಳ ಮಾರ್ಗದಲ್ಲಿ ಒಟ್ಟು ಎರಡು ಬಸ್‌ಗಳನ್ನು ಓಡಿಸಲಾಯಿತು. ಧರ್ಮ ಸ್ಥಳ ಮಾರ್ಗವಾಗಿ ಬೆಂಗಳೂರಿಗೆ ಹೊರಟ ಬಸ್ಸಿನಲ್ಲಿ 20 ಪ್ರಯಾಣಿಕರಿದ್ದರೆ, ಭಟ್ಕಳದ ಬಸ್ಸಿನಲ್ಲಿ ಪ್ರಯಾಣಿಕರು ತೀರಾ ವಿರಳವಾಗಿದ್ದರು. ಇಂದು ರಾತ್ರಿ ಎರಡು ಬಸ್‌ಗಳು ಬೆಂಗಳೂರಿಗೆ ಹೊರಡಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಒಟ್ಟು 9 ಚೆಕ್‌ಪೋಸ್ಟ್ ಮತ್ತು 16 ಪಿಕೆಟಿಂಗ್ ಪಾಯಿಂಟ್‌ಗಳಲ್ಲಿ ಪೊಲೀಸರು ವಾಹನ ತಾಪಸಣೆ ಹಾಗೂ ಚಾಲಕರ ವಿಚಾರಣೆಯನ್ನು ನಡೆಸಿದರು. ಇಂದು ಕೂಡ ಜಿಲ್ಲೆಯಲ್ಲಿ ಕರ್ಫ್ಯೂ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ವಾಹನಗಳನ್ನು ವಶಪಡಿಸಿಕೊಂಡಿಲ್ಲ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.








