ಉಚಿತ ಪಡಿತರ ನೀಡಿದರೆ ಜನತೆ ಕೆಲಸ ಮಾಡುವುದಿಲ್ಲ: ವಿಜಯ ಸಂಕೇಶ್ವರ
"ಲಿಂಬೆ ಹಣ್ಣಿನ ರಸವನ್ನು ಮೂಗಿನಲ್ಲಿ ಹಾಕಿಕೊಂಡರೆ ಉಸಿರಾಟದ ಸಮಸ್ಯೆ ಕಡಿಮೆಯಾಗಲಿದೆ"

ಹುಬ್ಬಳ್ಳಿ, ಎ.25: ಕೇಂದ್ರ ಸರಕಾರ ಜನತೆಗೆ ಉಚಿತವಾಗಿ ಪಡಿತರ ನೀಡಿದರೆ ಅವರು ಕೆಲಸ ಮಾಡುವುದಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಉಚಿತ ಪಡಿತರ ನೀಡಬಾರದೆಂದು ಉದ್ಯಮಿ ವಿಜಯ ಸಂಕೇಶ್ವರ ಒತ್ತಾಯಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತೆಗೆ ಉಚಿತ ಪಡಿತರ ನೀಡಿದರೆ ಜನತೆ ಕೆಲಸಕ್ಕೆ ಬರದೆ ಮನೆಯಲ್ಲಿಯೇ ಉಳಿಯುತ್ತಾರೆ. ಇದರಿಂದ ಕೈಗಾರಿಕಾ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸರಕಾರ ಪದೇ ಪದೇ ಇದೇ ತಪ್ಪುಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರಕಾರ ಕೊರೋನ ಮೊದಲ ಅಲೆಯ ಲಾಕ್‍ಡೌನ್ ಸಂದರ್ಭ ಹಾಗೂ ನಂತರದ ಮೂರು ತಿಂಗಳು ಜನರಿಗೆ ಉಚಿತ ಪಡಿತರ ನೀಡಿತ್ತು. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲೂ ದೇಶದ 80 ಕೋಟಿ ಮಂದಿಗೆ ಉಚಿತ ಪಡಿತರ ನೀಡಲು ನಿರ್ಧರಿಸಿದೆ. ದೇಶದ ಬಡಜನರಿಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಅವರಿಗೆ ಉಚಿತ ಪಡಿತರ ನೀಡಿದರೆ ಅವರು ಕೆಲಸ ಮಾಡದೆ ಮನೆಗಳಿಗೆ ತೆರಳುತ್ತಾರೆಂದು ಅವರು ಆಪಾದಿಸಿದ್ದಾರೆ.
ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರು ಚುನಾವಣಾ ಪ್ರಚಾರ ನಡೆಸಿರುವುದು ಸರಿಯಲ್ಲ. ಕೋವಿಡ್ ನಿಯಂತ್ರಣಕ್ಕೆ ಸರಕಾರ ಉತ್ತಮ ನಿರ್ಧಾರಗಳನ್ನೇ ತೆಗೆದುಕೊಂಡಿದೆ. ಹೆಚ್ಚು ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಇಷ್ಟು ಮಾಡಿರುವುದು ದೊಡ್ಡ ಸಾಧನೆ ಎಂದು ಅಭಿಪ್ರಾಯಿಸಿದ್ದಾರೆ.
"ಉಸಿರಾಟದ ಸಮಸ್ಯೆಗೆ ನಿಂಬೆ ರಸ ರಾಮಬಾಣ"
ಉಸಿರಾಟ ಮತ್ತು ಆಮ್ಲಜನಕ ಸಮಸ್ಯೆಯಿಂದ ಬಳಲುತ್ತಿರುವವರು ಲಿಂಬೆ ಹಣ್ಣಿನ ರಸವನ್ನು ಮೂಗಿನಲ್ಲಿ ಹಾಕಿಕೊಂಡರೆ ಉಸಿರಾಟದ ಸಮಸ್ಯೆ ಕಡಿಮೆಯಾಗಲಿದೆ. ನನ್ನ ಹಲವು ಪರಿಚಯಸ್ಥರ ಆಕ್ಸಿಜನ್ ಲೆವೆಲ್ ಕುಸಿತ ಕಂಡವರು, ನಿಂಬೆ ರಸವನ್ನು ಮೂಗಿಗೆ ಹಾಕಿಕೊಳ್ಳುವ ಮೂಲಕ ಕೇವಲ ಅರ್ಧಗಂಟೆಯಲ್ಲಿ ಆಕ್ಸಿಜನ್ ಲೆವೆಲ್ ಹೆಚ್ಚಿಸಿಕೊಂಡ ಉದಾಹರಣೆಗಳಿವೆ. ಕೊರೋನ ಸೋಂಕು ಪೀಡಿತರು, ಆಕ್ಸಿಜನ್‍ಗಾಗಿ ಪರದಾಡುತ್ತಿರುವವರು ಈ ಪದ್ಧತಿ ರೂಢಿಸಿಕೊಂಡು ಸಮಸ್ಯೆಯಿಂದ ಹೊರಬರಬಹುದು.
-ವಿಜಯಸಂಕೇಶ್ವರ್, ಉದ್ಯಮಿ







