ಉಡುಪಿ: ಹಸಿದ ಹೊಟ್ಟೆಗಳಿಗೆ ಸದ್ದಿಲ್ಲದೆ ಊಟ ನೀಡಿ ಮಾನವೀಯತೆ ಮೆರೆದ ಮಹಿಳೆ

ಉಡುಪಿ, ಎ.25: ವಾರಾಂತ್ಯ ಕರ್ಫ್ಯೂನಿಂದಾಗಿ ಶನಿವಾರ ಉಡುಪಿ ನಗರದಲ್ಲಿ ರಾತ್ರಿ ಊಟ ಇಲ್ಲದೆ ಹಸಿದಿದ್ದ ಅಸಹಾಯಕರಿಗೆ ಮಲ್ಪೆಯ ಮಹಿಳೆಯೊಬ್ಬರು ಮನೆಯಲ್ಲಿ ತಯಾರಿಸಿ ತಂದ ಊಟವನ್ನು ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸದ್ದಿಲ್ಲದೆ ತನ್ನ ಪತಿಯೊಂದಿಗೆ ಬಂದು ಊಟ ನೀಡುವ ಮಹಿಳೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರ ವಾಗಿದೆ. ಇವರು ಸುಮಾರು 50 ತುಪ್ಪದ ಅನ್ನ ಹಾಗೂ ಚಿಕನ್ ಸಾರಿನ 50 ಪೊಟ್ಟಣಗಳನ್ನು ಮನೆಯಲ್ಲಿ ತಯಾರಿಸಿ ತಂದು, ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣ, ಅಜ್ಜರಕಾಡು, ಡಯಾನ ಸರ್ಕಲ್ ಮತ್ತು ಮಲ್ಪೆಯ ಪರಿಸರದಲ್ಲಿ ಊಟ ಸಿಗದೆ ಅಸಹಾಯಕರಾಗಿದ್ದವರಿಗೆ ಹಂಚಿದರು.
‘ನಾವು ತಿಂಗಳಿಗೊಮ್ಮೆ ಈ ರೀತಿ ಅಸಹಾಯಕರಿಗೆ ಆಹಾರವನ್ನು ನೀಡುವ ಕೆಲಸ ಮಾಡುತ್ತಿದ್ದೇವೆ. ಮಕ್ಕಳ ಹುಟ್ಟುಹಬ್ಬದ ದಿನದಂದು ಕೂಡ ಇವರಿಗೆ ಆಹಾರವನ್ನು ಹಂಚುತ್ತೇವೆ. ಇದೀಗ ಕರ್ಫ್ಯೂನಿಂದ ಇವರಿಗೆಲ್ಲ ಊಟ ಸಿಗದಿರುವುದನ್ನು ಮನಗಂಡು ನಾವೇ ಮನೆಯಲ್ಲಿ ತಯಾರಿಸಿ ತಂದ ಅನ್ನ ಸಾರನ್ನು ನೀಡಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆಹಾರ ವಿತರಿಸಿದ ಮಹಿಳೆ ತಿಳಿಸಿದ್ದಾರೆ.





