ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದ ಬಾಬರ್ ಆಝಂ
ಟ್ವೆಂಟಿ-20 ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ 2,000 ರನ್ ಪೂರೈಸಿದ ಸಾಧನೆ

ಹರಾರೆ: ಟ್ವೆಂಟಿ-20 ಮಾದರಿಯ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ 2,000 ರನ್ ಪೂರೈಸಿದ ಸಾಧನೆ ಮಾಡಿರುವ ಪಾಕಿಸ್ತಾನದ ನಾಯಕ ಬಾಬರ್ ಆಝಂ ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.
ಹರಾರೆ ಸ್ಪೋಟ್ಸ್ ಕ್ಲಬ್ ನಲ್ಲಿ ರವಿವಾರ ಝಿಂಬಾಬ್ವೆ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಬಾಬರ್ ಈ ಸಾಧನೆ ಮಾಡಿದರು.
ಪಾಕ್ ನಾಯಕ ಬಾಬರ್ ಆಝಂ ಅವರು 2,000 ಟಿ-20 ರನ್ ಪೂರೈಸಲು 52 ಇನಿಂಗ್ಸ್ ತೆಗೆದುಕೊಂಡರು. ಈ ಮೂಲಕ ವಿರಾಟ್ ಕೊಹ್ಲಿ ದಾಖಲೆ ಮುರಿದರು. ವಿರಾಟ್ ಕೊಹ್ಲಿ 56 ಇನಿಂಗ್ಸ್ ಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು. ಆಸ್ಟ್ರೇಲಿಯದ ನಾಯಕ ಆ್ಯರೊನ್ ಫಿಂಚ್(62 ಇನಿಂಗ್ಸ್) ಹಾಗೂ ನ್ಯೂಝಿಲ್ಯಾಂಡ್ ನ ಮಾಜಿ ನಾಯಕ ಬ್ರೆಂಡನ್ ಮೆಕಲಂ(66 ಇನಿಂಗ್ಸ್)ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಟ್ವೆಂಟಿ-20 ಕ್ರಿಕೆಟ್ ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಈಗಲೂ ಮುಂಚೂಣಿಯಲ್ಲಿದ್ದಾರೆ. ಭಾರತದ ನಾಯಕ ಕೊಹ್ಲಿ 3,159 ರನ್ ಗಳಿಸಿದ್ದರೆ, ಬಾಬರ್ 2,035 ರನ್ ಗಳಿಸಿ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ.
ಬುಧವಾರ ಬಿಡುಗಡೆಯಾಗಿರುವ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್ ನಲ್ಲಿ ಒಂದು ಸ್ಥಾನ ಭಡ್ತಿ ಪಡೆದಿರುವ ಬಾಬರ್ ಎರಡನೇ ಸ್ಥಾನಕ್ಕೇರಿದ್ದಾರೆ.