ಮೇ 23ರವರೆಗೆ ಹೈಕೋರ್ಟ್ ಪೀಠಗಳಿಗೆ ಬೇಸಿಗೆ ರಜೆ

ಬೆಂಗಳೂರು, ಎ.25: ನಾಳೆ(ಎ.26)ಯಿಂದ ಮೇ 23ರವರೆಗೆ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಹಾಗೂ ಧಾರವಾಡ ಪೀಠಗಳಿಗೆ ಬೇಸಿಗೆ ರಜೆ ನೀಡಲಾಗಿದೆ.
ಈ ಅವಧಿಯಲ್ಲಿ ಹೈಕೋರ್ಟ್ ರಜಾ ಕಾಲದ ಪೀಠಗಳು ಕಾರ್ಯ ನಿರ್ವಹಿಸಲಿವೆ. ಆದರೆ, ಬೆಂಗಳೂರು ಪ್ರಧಾನ ಪೀಠದಲ್ಲಿ ಫಿಸಿಕಲ್ ಕೋರ್ಟ್ ಬದಲಿಗೆ ಸಂಪೂರ್ಣ ವರ್ಚುಯಲ್ ಕೋರ್ಟ್ ನಡೆಸಲಾಗುತ್ತದೆ. ಹೀಗಾಗಿ, ಈ ಅವಧಿಯಲ್ಲಿ ವಕೀಲರು ಹಾಗೂ ಪಾರ್ಟಿ-ಇನ್-ಪರ್ಸನ್ ಆನ್‍ಲೈನ್ ಮೂಲಕವೇ ಕೋರ್ಟ್ ಕಲಾಪದಲ್ಲಿ ಭಾಗವಹಿಸಲು ಸೂಚಿಸಲಾಗಿದೆ.
ಇನ್ನು ರಜಾ ಅವಧಿಯಲ್ಲಿ ಎ.23ಕ್ಕಿಂತ ಹಿಂದೆ ಸಲ್ಲಿಕೆಯಾಗಿರುವ ಪ್ರಕರಣಗಳಲ್ಲಿ ತುರ್ತು ವಿಚಾರಣೆ ಅಗತ್ಯವಿದ್ದರೆ ಈ ಸಂಬಂಧ ವಕೀಲರು ಅಥವಾ ಪಾರ್ಟಿ-ಇನ್-ಪರ್ಸನ್ ಪ್ರಕರಣದ ವಿಚಾರಣೆ ಕೋರಿ ನ್ಯಾಯಾಂಗ ರಿಜಿಸ್ಟ್ರಾರ್ ಅವರ ಇ-ಮೇಲ್ (regjudicial@hck.gov.in)ಗೆ ಮೆಮೋ ಕಳಿಸುವಂತೆ ಸೂಚಿಸಲಾಗಿದೆ.
ಈ ಇ-ಮೇಲ್‍ಗಳನ್ನು ರಿಜಿಸ್ಟ್ರಾರ್ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಿದ್ದು, ಅವರು ಪರಿಶೀಲಿಸಿ ನಿರ್ಣಯ ಕೈಗೊಳ್ಳಲಿದ್ದಾರೆ. ಒಂದು ವೇಳೆ ಮೆಮೋ ಸಲ್ಲಿಸುವುದಾದರೆ ಎ.26, ಮೇ.3, 10 ಹಾಗೂ 17ರಂದು ಕಳುಹಿಸುವಂತೆ ನ್ಯಾಯಾಂಗ ರಿಜಿಸ್ಟ್ರಾರ್ ಕೆ,ಎಸ್ ಭರತ್ ಕುಮಾರ್ ನೋಟಿಸ್ ಹೊರಡಿಸಿದ್ದಾರೆ.





