ವಿಕ್ಟೋರಿಯಾ ಆವರಣದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
'ಪೋರ್ಟಬಲ್ ಆಕ್ಸಿಜನ್ ಪೂರೈಕೆ'

ಬೆಂಗಳೂರು, ಎ. 25: ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ರವಿವಾರ ವಿಕ್ಟೋರಿಯಾ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಒಂದು ಕಟ್ಟಡದಲ್ಲಿ 85 ಹಾಸಿಗೆ, ಪಿಎಂಎಸ್‍ಎಸ್‍ವೈನಲ್ಲಿ 180 ಹಾಸಿಗೆಯನ್ನು ಸಂಪೂರ್ಣ ಕೋವಿಡ್‍ಗೆ ಮೀಸಲಿಡಲಾಗುವುದು. ಜೊತೆಗೆ 100 ರಿಂದ 150 ಐಸಿಯು ಹಾಸಿಗೆ ಇರುವ ಆಸ್ಪತ್ರೆ ನಿರ್ಮಿಸಲಾಗುವುದು. ಇದನ್ನು ಅಂತಿಮಗೊಳಿಸಲಾಗುವುದು. ಹಲವು ಜಿಲ್ಲಾ ಕೇಂದ್ರಗಳ ಮೆಡಿಕಲ್ ಕಾಲೇಜುಗಳ ಆವರಣದಲ್ಲಿ ಈ ರೀತಿ ಮೇಕ್ ಶಿಫ್ಟ್ ಆಸ್ಪತ್ರೆ ರೂಪಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿಗೆ 5 ಸಾವಿರ, ಬೇರೆ ಜಿಲ್ಲೆಗಳಿಗೆ ತಲಾ ಒಂದು ಸಾವಿರದಂತೆ ಪೆÇೀರ್ಟಬಲ್ ಆಕ್ಸಿಜನ್ ನೀಡಲಾಗುವುದು. ಆಕ್ಸಿಜನ್ ಬೇಕಾದವರು ಮಾತ್ರ ಇಂತಹ ಸೌಲಭ್ಯ ಬಳಸಿಕೊಳ್ಳಬಹುದು. ಮನೆ ಆರೈಕೆಯಲ್ಲಿರುವವರಿಗೆ ಸಿಐಐ ಸಹಯೋಗದಲ್ಲಿ ಮಾರ್ಗದರ್ಶನ ನೀಡಲಾಗುವುದು ಎಂದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಶೇ.75ರಷ್ಟು ಹಾಸಿಗೆಯನ್ನು ಕೋವಿಡ್‍ಗೆ ಮೀಸಲಿಡಲು ನಿರ್ಧರಿಸಲಾಗಿದೆ.
ಬೆಂಗಳೂರಿನಲ್ಲಿ ಎರಡರಿಂದ ಎರಡೂವರೆ ಸಾವಿರ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲಾಗುವುದು. ಒಂದು ಘಟಕವು 200-250 ಹಾಸಿಗೆಗಳನ್ನು ಹೊಂದಿರುತ್ತದೆ. ಆಸ್ಪತ್ರೆಗಳ ಆವರಣದಲ್ಲೇ ಇದನ್ನು ಅಭಿವೃದ್ಧಿಪಡಿಸಲಾಗುವುದು. 15 ದಿನದೊಳಗೆ ಇದನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ದಿನಕ್ಕೆ 300 ಟನ್ ಆಕ್ಸಿಜನ್ ಪೂರೈಕೆ ನಿಗದಿಪಡಿಸಿದ್ದು, ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ ಬಳಿಕ 800 ಟನ್‍ಗೆ ಹೆಚ್ಚಿಸಲಾಗಿದೆ. ಇದು ಎ.30ರ ವರೆಗೆ ಸಿಗಲಿದೆ. ಒಂದು ಲಕ್ಷಕ್ಕೂ ಹೆಚ್ಚು ರೆಮ್ ಡಿಸಿವಿರ್ ಬೇಕೆಂದು ಕೋರಿದ್ದು, ಅದರಂತೆ 1.22ಲಕ್ಷ ಔಷಧಿ ದೊರೆತಿದೆ ಎಂದು ಅವರು ತಿಳಿಸಿದರು.
ಸಭೆ: ರಾಜ್ಯದಲ್ಲಿ ಆಕ್ಸಿಜನ್ ಹಾಗೂ ರೆಮ್‍ಡಿಸಿವಿರ್ ಲಭ್ಯತೆ ಕುರಿತಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರೊಂದಿಗೆ ನಡೆದ ಸಭೆಯಲ್ಲಿ ಸಚಿವರು ಪಾಲ್ಗೊಂಡ ಸಚಿವ ಸುಧಾಕರ್ ಅವರು, ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್, ಔಷಧಿ ನಿರಂತರ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಸಚಿವರು ಸಭೆಗೆ ತಿಳಿಸಿದರು.
ಸರಕಾರಿ-ಖಾಸಗಿ ಆಸ್ಪತ್ರೆಗಳ ಹಾಸಿಗೆ ಲಭ್ಯ
ರಾಜ್ಯದಲ್ಲಿ ಆರೋಗ್ಯ ಇಲಾಖೆಯಡಿಯ ಆಸ್ಪತ್ರೆಗಳಲ್ಲಿ ಇರುವ ಹಾಸಿಗೆಗಳು ಒಟ್ಟು 31,444, ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿರುವ ಹಾಸಿಗೆಗಳು ಒಟ್ಟು 14,617, ಖಾಸಗಿ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳು ಒಟ್ಟು 38,600, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿರುವ ಹಾಸಿಗೆಗಳು ಒಟ್ಟು 35,766.
ವೆಂಟಿಲೇಟರ್ ಸಹಿತ ಇರುವ ಐಸಿಯು ಹಾಸಿಗೆಗಳ ಸಂಖ್ಯೆ/ಕೋವಿಡ್ ರೋಗಿಗಳಿಗೆ ಮೀಸಲಾದ ಹಾಸಿಗೆ ಸಂಖ್ಯೆ:
ಸರಕಾರಿ ವ್ಯವಸ್ಥೆಯಡಿ ಇರುವ ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು ಒಟ್ಟು 2,108, ಸರಕಾರಿ ಆಸ್ಪತ್ರೆಗಳಲ್ಲಿ-1,126, ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ-982. ಖಾಸಗಿ ವ್ಯವಸ್ಥೆಯಡಿ ಇರುವ ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು ಒಟ್ಟು 1,662. ಖಾಸಗಿ ಆಸ್ಪತ್ರೆಗಳಲ್ಲಿ-680. ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ-982.
ಕೋವಿಡ್ ರೋಗಿಗಳಿಗೆ ಮೀಸಲಾದ ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು:
ಸರಕಾರಿ ಆಸ್ಪತ್ರೆ: 892
ಸರಕಾರಿ ಮೆಡಿಕಲ್ ಕಾಲೇಜು: 576
ಖಾಸಗಿ ಆಸ್ಪತ್ರೆ: 285
ಖಾಸಗಿ ಮೆಡಿಕಲ್ ಕಾಲೇಜು: 283
ಐಸಿಯು ಇರುವ ಹಾಸಿಗೆಗಳ ಸಂಖ್ಯೆ ಒಟ್ಟು (ಸರಕಾರಿ-ಖಾಸಗಿ ಸೇರಿ) 3,770. ಈ ಪೈಕಿ 2,036 ಕೋವಿಡ್‍ಗೆ ಮೀಸಲಿಡಲಾಗಿದೆ.







