ದ.ಕ.ಜಿಲ್ಲೆ : 564 ಮಂದಿಗೆ ಕೊರೋನ ಸೋಂಕು; ಓರ್ವ ಮೃತ್ಯು
ಮಂಗಳೂರು, ಎ.25: ದ.ಕ.ಕೋವಿಡ್ ಎರಡನೇ ಅಲೆಯು ದುಷ್ಪರಿಣಾಮ ಬೀರುತ್ತಿದ್ದು, ದಿನದಿಂದ ದಿನಕ್ಕೆ ಸಾವು, ಸೋಂಕಿನ ಪ್ರಮಾಣದ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ.
ರವಿವಾರ ನಗರದ ಸುಮಾರು 56 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 748ಕ್ಕೇರಿದೆ. ಅಲ್ಲದೆ 564 ಮಂದಿಗೆ ಕೊರೋನ ಪಾಸಿಟಿವ್ ಆಗಿದೆ.
ರವಿವಾರ ಎರಡು ಕಂಟೈನ್‌ಮೆಂಟ್ ವಲಯವನ್ನು ರವಿವಾರ ಘೋಷಣೆ ಮಾಡಲಾಗಿದೆ. ನಗರದ ದೇರಳಕಟ್ಟೆಯ ಮಹಿಳಾ ಹಾಸ್ಟೆಲ್‌ನಲ್ಲಿರುವ 11 ವಿದ್ಯಾರ್ಥಿಗಳ ಸಹಿತ ಜೋಕಟ್ಟೆಯ ಎಚ್‌ಪಿಎಸ್‌ಸಿಎಲ್ ಕಾಲನಿಯ ಮನೆಯೊಂದರಲ್ಲಿ 11 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡ ಪರಿಣಾಮ ಎರಡನ್ನು ಕೂಡ ಕಂಟೈನ್ಮೆಂಟ್ ವಲಯವನ್ನಾಗಿ ಘೋಷಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ರವಿವಾರ 165 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 349 ಮಂದಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ 2,518 ಮಂದಿ ಹೋಮ್ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ರವಿವಾರ ವೀಕೆಂಡ್ ಕರ್ಫ್ಯೂ ಇದ್ದ ಕಾರಣ ಲಸಿಕೆಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ರವಿವಾರ 3,082 ಮಂದಿ ಲಸಿಕೆ ಸ್ವೀಕರಿಸಿದ್ದಾರೆ. ಸೋಮವಾರ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಬೆಂಗಳೂರಿನಿಂದ ಮಂಗಳೂರಿಗೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಡಿಸಿ ಸಭೆ: ಜಿಲ್ಲೆಯ 15ಕ್ಕೂ ಅಧಿಕ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರ ಜತೆಯಲ್ಲಿ ರವಿವಾರ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಗೂಗಲ್ ಮೀಟ್ ಮೂಲಕ ಸಭೆ ನಡೆಸಿದರು. ಮುಖ್ಯವಾಗಿ ಖಾಸಗಿ ಆಸ್ಪತ್ರೆಯಲ್ಲಿರುವ ಬೆಡ್‌ಗಳ ಸ್ಥಿತಿಗತಿ, ಆಕ್ಸಿಜನ್, ಆ್ಯಂಬುಲೆನ್ಸ್ ಇತ್ಯಾದಿ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಡಿಎಚ್‌ಒ ಡಾ. ಕಿಶೋರ್ ಕುಮಾರ್ ಎಂ, ಕೋವಿಡ್ ನೋಡಲ್ ಅಧಿಕಾರಿ ಡಾ. ಅಶೋಕ್, ಆರ್‌ಸಿಎಚ್ ಅಧಿಕಾರಿ ಡಾ. ರಾಜೇಶ್, ಸರ್ವೆಲೆನ್ಸ್ ಅಧಿಕಾರಿ ಡಾ. ಜಗದೀಶ್, ಐಇಸಿಯ ಜ್ಯೋತಿ ಉಳೇಪಾಡಿ ಉಪಸ್ಥಿತರಿದ್ದರು.







