ವಾರಾಂತ್ಯ ಕರ್ಫ್ಯೂ: ಎರಡನೇ ದಿನವೂ ಜನಜೀವನ ಸ್ತಬ್ಧ

ಬೆಂಗಳೂರು, ಎ.25: ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ರಾಜ್ಯದೆಲ್ಲೆಡೆ ಜಾರಿಗೊಳಿಸಿದ್ದ ವಾರಾಂತ್ಯ ಕರ್ಫ್ಯೂವಿನ ಎರಡನೇ ದಿನವಾದ ರವಿವಾರವೂ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿತ್ತು.
ರಾಜಧಾನಿ ಬೆಂಗಳೂರು ಸೇರಿದಂತೆ ಆಯಾ ಜಿಲ್ಲೆ, ನಗರ, ಪಟ್ಟಣ, ಹೋಬಳಿ ಕೇಂದ್ರಗಳಲ್ಲಿ ವ್ಯಾಪಾರ ವಹಿವಾಟು ಸ್ಪಬ್ಧವಾಗಿತ್ತು. ಜನರ ಓಡಾಟವೂ ವಿರಳವಾಗಿತ್ತು. ತುರ್ತು ಅವಶ್ಯಕತೆಗಾಗಿ ಮಾತ್ರ ಸಾರ್ವಜನಿಕರು ಸಂಚರಿಸುತ್ತಿದ್ದ ದೃಶ್ಯ ಕಂಡುಬಂದಿತು.
ರವಿವಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗಾಗಿ ಕಫ್ರ್ಯೂ ಸಡಿಲಿಕೆ ಇತ್ತು. ಔಷಧ ಅಂಗಡಿಗಳು, ಹಣ್ಣು, ತರಕಾರಿ, ಮಾಂಸದ ಅಂಗಡಿಗಳು, ದಿನಪತ್ರಿಕೆ, ಹಾಲಿನ ಕೇಂದ್ರಗಳು, ದಿನಸಿ ಅಂಗಡಿಗಳು, ಕೆಲವು ಹೊಟೇಲ್‍ಗಳು ತೆರೆದಿದ್ದವು.
10 ಗಂಟೆಯ ನಂತರ ಔಷಧ ಅಂಗಡಿಗಳು, ಹೊಟೇಲ್, ರೆಸ್ಟೋರೆಂಟ್‍ಗಳನ್ನು ಬಿಟ್ಟು ಎಲ್ಲ ಅಂಗಡಿಗಳು ಮುಚ್ಚಿದವು. ಹೊಟೇಲ್, ರೆಸ್ಟೋರೆಂಟ್‍ಗಳಲ್ಲಿ ಪಾರ್ಸೆಲ್ ಸೌಲಭ್ಯ ಮಾತ್ರ ಇತ್ತು.
ವಾಹನ ಸಂಚಾರ ಇಲ್ಲ: ಖಾಸಗಿ ಬಸ್‍ಗಳು, ಟ್ಯಾಕ್ಸಿಗಳು ಹೆಚ್ಚಾಗಿ ರಸ್ತೆಗೆ ಇಳಿಯಲಿಲ್ಲ. ಕಫ್ರ್ಯೂ ಸಡಿಲಿಕೆಯ ಅವಧಿಯಲ್ಲಿ ಕೆಲವು ಆಟೊಗಳು ಓಡಾಡುತ್ತಿದ್ದವು. 10 ಗಂಟೆಯ ನಂತರ ಅವುಗಳು ಕೂಡ ಇರಲಿಲ್ಲ. ಇನ್ನು, ಕೆಎಸ್ಸಾರ್ಟಿಸಿ ಬಸ್‍ಗಳು ಇದ್ದರೂ, ಪ್ರಯಾಣಿಕರು ಇರಲಿಲ್ಲ.
ಪರಿಶೀಲನೆ: ಔಷಧ ತರಲು, ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು, ಚಿಕಿತ್ಸೆಗಾಗಿ ಕ್ಲಿನಿಕ್ ಆಸ್ಪತ್ರೆಗಳಿಗೆ ಹೋಗುವವರು ಓಡಾಡುತ್ತಿದ್ದರು. ಸಂಚರಿಸುತ್ತಿದ್ದವರನ್ನು ಪೊಲೀಸರು ತಡೆದು ವಿಚಾರಿಸಿ ಆ ಬಳಿಕ ಬಿಡುತ್ತಿದ್ದರು.
ಮಾಂಸ ಖರೀದಿ ಜೋರು!
ರವಿವಾರ ಮಾಂಸ ಖರೀದಿಗಾಗಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ನಗರಾದಾದ್ಯಂತ ಕಂಡು ಬಂದವು. ಮಹಾಮಾರಿ ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರಕಾರ ಈಗಾಗಲೆ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ವಾರಾಂತ್ಯ ಕರ್ಫ್ಯೂ ಕೂಡ ವಿಧಿಸಿದೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೂ ಅಗತ್ಯವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದೆ.
ಆದರೆ, ರವಿವಾರ ಜನ ಜಾತ್ರೆಯಂತೆ ಮಾಂಸದಂಗಡಿಗಳ ಮುಂದೆ ಸಾಲು ಸಾಲಾಗಿ ನಿಂತು ನಾ ಮುಂದು ತಾ ಮುಂದು ಎಂದು ಪೈಪೋಟಿಯಲ್ಲಿ ಮಾಂಸ ಖರೀದಿಯಲ್ಲಿ ತಲ್ಲಿನರಾಗಿದ್ದರು. ಇಲ್ಲಿನ ಮಹಾಲಕ್ಷ್ಮೀಲೇಔಟ್, ಆರ್‍ಟಿನಗರ, ಶಿವಾಜಿ ನಗರದ ರಸೆಲ್ ಮಾರ್ಕೆಟ್, ಕಾಮಾಕ್ಷಿಪಾಳ್ಯ, ಉಲ್ಲಾಳ ಮುಖ್ಯರಸ್ತೆ, ನಾಗರಭಾವಿ, ವಿಜಯನಗರ, ಜಯನಗರ, ಕೆಆರ್ ಮಾರುಕಟ್ಟೆ, ಮಲ್ಲೆಶ್ವರಂ, ಯಶವಂತಪುರ, ಕೆಆರ್ ಪುರ ಸೇರಿದಂತೆ ನಗರದ ಬಹುತೇಕ ಕಡೆ ಮೀನು, ಕುರಿ ಕೋಳಿ ಮಾಂಸಕ್ಕಾಗಿ ಜನರು ಚೀಲಗಳನ್ನು ಹಿಡಿದು ಅಂಗಡಿಗಳ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಅಳಲು ತೋಡಿಕೊಂಡ ಮದುವೆ ಗಂಡು!
ಕರ್ಫ್ಯೂ ಹಿನ್ನೆಲೆ ಇಲ್ಲಿನ ಮಾಗಡಿ ರಸ್ತೆ ಸಂಚಾರ ಠಾಣಾ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ನಡೆಸುವಾಗ ಬೈಕ್‍ನಲ್ಲಿ ಬಂದ ಮದುವೆ ಗಂಡು ಹಾಗೂ ಆತನ ತಂದೆಯನ್ನು ಪೊಲೀಸರು ತಡೆದರು. ಈ ವೇಳೆ ಸರ್, ನಾನು ಮದುವೆ ಗಂಡು. ಮದುವೆಯಾಗಲು ಹೋಗುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾನೆ. ಮದುವೆ ಆಮಂತ್ರಣ ಪತ್ರಿಕೆ ತೋರಿಸಿ ಹೆಸರು ಖಾತ್ರಿ ಪಡಿಸಿಕೊಂಡ ಬಳಿಕ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.






.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)

