ವರನಿಗೆ ಸೋಂಕು: ಕೋವಿಡ್ ವಾರ್ಡ್ ನಲ್ಲೇ ಮದುವೆ; ಪಿಪಿಇ ಕಿಟ್ ಧರಿಸಿ ಬಂದ ವಧು

photo: thenewsminute
ತಿರುವನಂತಪುರ: ಆಲಪ್ಪುಳ ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್ ರವಿವಾರ ಮದುವೆಯೊಂದಕ್ಕೆ ಸಾಕ್ಷಿಯಾಯಿತು. ಕೇರಳದ ಆಲಪ್ಪುಳ ಜಿಲ್ಲೆಯ ಕೈನಕರಿಯ ನಿವಾಸಿಗಳಾದ ಶರತ್ ಹಾಗೂ ಅಭಿರಾಮಿ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ. ವರನಿಗೆ ಕೆಲವು ದಿನಗಳ ಹಿಂದೆ ಸೋಂಕು ದೃಢಪಟ್ಟಿತ್ತು. ಆದರೆ ಇದು ಮದುವೆಯ ಉತ್ಸಾಹಕ್ಕೆ ಧಕ್ಕೆಯಾಗಲಿಲ್ಲ. ನಿಗದಿತ ಸಮಯಕ್ಕೆ ಕೋವಿಡ್ ವಾರ್ಡ್ ನಲ್ಲಿಯೇ ನವಜೋಡಿ ದಾಂಪತ್ಯ ಬದುಕಿಗೆ ಕಾಲಿಟ್ಟಿತು. ವಧು ಪಿಪಿಇ ಧರಿಸಿ ಕೋವಿಡ್ ವಾರ್ಡ್ ಪ್ರವೇಶಿಸಿದರು. ವರನ ತಾಯಿ ಇಬ್ಬರಿಗೂ ಹೂಹಾರ ಹಸ್ತಾಂತರಿಸಿದರು.
ಶರತ್ ಹಾಗೂ ಅಭಿರಾಮಿ ಅವರು ಜಿಲ್ಲಾಧಿಕಾರಿ ಹಾಗೂ ಇತರ ಸಂಬಂಧಿತ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆದಿದ್ದರು. ಸೋಂಕಿನಿಂದಾಗಿ ಅದೇ ವಾರ್ಡ್ ಗೆ ದಾಖಲಾಗಿದ್ದ ಶರತ್ ತಾಯಿ ಜಿಜಿಮೊಲ್ ಅವರು ಮದುವೆಯಲ್ಲಿ ಭಾಗವಹಿಸಲು ಸಾಧ್ಯವಾಯಿತು.
ಈ ಇಬ್ಬರ ಮದುವೆ ಎರಡು ವರ್ಷಗಳ ಹಿಂದೆಯೇ ನಿಶ್ಚಯವಾಗಿತ್ತು. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಶರತ್, ಕೋವಿಡ್ ಪರಿಸ್ಥಿತಿಯ ಕಾರಣ ಸ್ವದೇಶಕ್ಕೆ ವಾಪಸ್ ಆಗಿರಲಿಲ್ಲ. ಅಂತಿಮವಾಗಿ ಕುಟುಂಬದವರು ರವಿವಾರ (ಎ.25) ಮದುವೆ ನಿಗದಿಪಡಿಸಿದ್ದರು. ಆದರೆ ಶರತ್ ಹಾಗೂ ಅವರ ತಾಯಿ ಇಬ್ಬರೂ ಸೋಂಕು ತಗಲಿ ಆಸ್ಪತ್ರೆಗೆ ದಾಖಲಾದರು. ಸದ್ಯಕ್ಕೆ ಮದುವೆಗೆ ಉತ್ತಮ ಮಹೂರ್ತ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕುಟುಂಬದವರು ಆಸ್ಪತ್ರೆಯಲ್ಲಿಯೇ ಮದುವೆ ಮಾಡಲು ನಿರ್ಧರಿಸಿದರು.







