ಲಸಿಕೆ ಉತ್ಪಾದಕರಿಗೆ 1.11 ಲಕ್ಷ ಕೋಟಿ ಲಾಭ ಮಾಡಿಕೊಡುತ್ತಿರುವ ಮೋದಿ ಸರಕಾರ: ಕಾಂಗ್ರೆಸ್ ವಾಗ್ದಾಳಿ

ಹೊಸದಿಲ್ಲಿ, ಎ.25: ನೂತನ ಕೋವಿಡ್ ನಿರೋಧಕ ಲಸಿಕೆ ನೀತಿಯು ‘‘ತಾರತಮ್ಯ ಕರ ಹಾಗೂ ಅಸಂವೇದನಕಾರಿಯಾಗಿದ್ದು, ಲಸಿಕೆ ಉತ್ಪಾದಕರಿಗೆ 1.10 ಲಕ್ಷ ಕೋಟಿ ರೂ. ಲಾಭವನ್ನು ಗಳಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ಪಕ್ಷ ರವಿವಾರ ಆಪಾದಿಸಿದೆ.
ದೇಶದ ಬಡವರು ಹಾಗೂ ಯುವಜನರಿಗೆ ಉಚಿತ ಲಸಿಕೆಗಳನ್ನು ಒದಗಿಸುವ ತನ್ನ ಹೊಣೆಗಾರಿಕೆಯನ್ನು ಮೋದಿ ಸರಕಾರ ತ್ಯಜಿಸಿದೆಯೆಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಆಪಾದಿಸಿದ್ದಾರೆ.
‘‘ಲಸಿಕೆಯ ಮೂಲಕ ಭಾರೀ ಲಾಭಮಾಡಿಕೊಳ್ಳುವ ಲಜ್ಜೆಗೇಡಿತನಕ್ಕೆ ಯಾಕೆ ಅನುಮತಿ ನೀಡುತ್ತೀರಿ?. ಕೊರೋನ ಸೋಂಕಿನ ಹಾವಳಿಯ ಸಮಯದಲ್ಲಿ, ಈ ರೀತಿಯ ಲಾಭಕೋರತನದ ಜೊತೆ ಮೋದಿ ಸರಕಾರವು ಯಾಕೆ ಸಹಕರಿಸುತ್ತಿದೆ. ಇದಕ್ಕೆ ಮೋದಿ ಸರಕಾರವು ಉತ್ತರಿಸಬೇಕಾಗಿದೆ’’ ಎಂದು ಸುರ್ಜೆವಾಲಾ, ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಲಸಿಕೆ ಅಭಿವೃದ್ಧಿ ಹಾಗೂ ಸಾಮೂಹಿಕ ಲಸಿಕೆ ನೀಡಿಕೆ ಪ್ರಕ್ರಿಯೆಯು ಮಹತ್ವದ ಸಾರ್ವಜನಿಕ ಸೇವೆಯಾಗಿದ್ದು,ಅದನ್ನು ಜನರ ವೆಚ್ಚದಲ್ಲಿ ಲಾಭ ಮಾಡಿಕೊಳ್ಳಲು ಇರುವ ಉದ್ಯಮ ಅವಕಾಶವೆಂದು ಭಾವಿಸಕೂಡದು ಎಂದವರು ಹೇಳಿದರು.
ಮೋದಿ ಸರಕಾರವು ಕಾಂಗ್ರೆಸ್, ಇಡೀ ಜಗತ್ತಿನಲ್ಲಿಯೇ ಅತ್ಯಂತ ತಾರತಮ್ಯಕರ ಹಾಗೂ ಅಸಂವೇದನಕಾರಿ ಲಸಿಕೆ ನೀತಿಯನ್ನು ಪರಿಚಯಿಸಿದೆ ಎಂದು ಕಾಂಗ್ರೆಸ್ ನಾಯಕ ತಿಳಿಸಿದರು.
ಮೋದಿ ಸರಕಾರವು ಲಸಿಕೆಗೆ ಹಣವನ್ನು ವಿಧಿಸುವ ಮೂಲಕ 18 ಹಾಗೂ 45 ವರ್ಷಗಳ ವಯೋಮಿತಿಯ ನಡುವಿನ ಯುವಜನರನ್ನು ಕೈಬಿಟ್ಟಿದೆ ಎಂದು ಅವರು ಆಪಾದಿಸಿದರು.
ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುವ ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯಗಳಿಗೆ ಪ್ರತಿ ಡೋಸ್ಗೆ 400 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂ. ವಿಧಿಸುತ್ತಿವೆ. ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ರಾಜ್ಯ ಸರಕಾರಗಳಿಗೆ ಪ್ರತಿ ಡೋಸ್ಗೆ 600 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1200 ರೂ. ವಿಧಿಸುತ್ತದೆ.
ಈ ಎರಡು ಲಸಿಕೆ ಉತ್ಪಾದಕರು ವಿಧಿಸಿರುವ ದರಗಳ ಪ್ರಕಾರ, ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ 35,350 ಕೋಟಿ ರೂ. ಹಾಗೂ ಭಾರತ್ ಬಯೋಟೆಕ್ 75,750 ಕೋಟಿ ರೂ. ಲಾಭ ಮಾಡಿಕೊಳ್ಳಲಿದೆ ಎಂದರು.
45 ವರ್ಷಕ್ಕಿಂತ ಕೆಳವಯಸ್ಸಿನ ಜನಸಂಖ್ಯೆ 101 ಕೋಟಿ ಆಗಿದೆ. ಅವರಿಗೆ ಲಸಿಕೆ ನೀಡಲು ನಮಗೆ 202 ಕೋಟಿ ಡೋಸ್ಗಳ ಅಗತ್ಯವಿದೆ ಎಂದವರು ಹೇಳಿದರು.







