ಹತ್ತು ರಾಜ್ಯಗಳಲ್ಲಿ ಶೇ.74.53 ಹೊಸ ಕೋವಿಡ್ ಪ್ರಕರಣಗಳು ಪತ್ತೆ

ಹೊಸದಿಲ್ಲಿ, ಎ.25: ದೇಶಾದ್ಯಂತ ದಾಖಲಾಗುತ್ತಿರುವ ದೈನಂದಿನ ಕೋವಿಡ್ 19 ಸೋಂಕಿನ ಪ್ರಕರಣಗಳ ಪೈಕಿ ಶೇ.74.53 ಪ್ರಕರಣಗಳು ಕರ್ನಾಟಕ, ಕೇರಳ,ಮಹಾರಾಷ್ಟ್ರ, ಉತ್ತರಪ್ರದೇಶ ಹಾಗೂ ದಿಲ್ಲಿ ಸೇರಿದಂತೆ ಹತ್ತು ರಾಜ್ಯಗಳಲ್ಲಿ ವರದಿಯಾಗುತ್ತಿವೆಯೆಂದು ಕೇಂದ್ರ ಆರೋಗ್ಯ ಸಚಿವಾಲಯವು ರವಿವಾರ ತಿಳಿಸಿದೆ.
ಕಳೆದ 24 ತಾಸುಗಳಲ್ಲಿ ಭಾರತದಲ್ಲಿ 3,49,691 ಹೊಸ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದು ದಿನದ ಗರಿಷ್ಠ ಹೆಚ್ಚಳವಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್-19 ಪ್ರಕರಣಗಳ ಒಟ್ಟು ಸಂಖ್ಯೆ 1,69,60,172ಕ್ಕೇರಿದೆ.
ಅತ್ಯಧಿಕ ಸಂಖ್ಯೆಯ ಕೋವಿಡ್-19 ಪ್ರಕರಣಗಳು ವರದಿಯಾಗುವ ಅಗ್ರ ಹತ್ತು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ,ಕೇರಳ,ಚತ್ತೀಸ್ಗಢ,ಪ.ಬಂಗಾಳ,ತಮಿಳುನಾಡು, ಗುಜರಾತ್ ಹಾಗೂ ರಾಜಸ್ಥಾನ ರಾಜ್ಯಗಳು ಒಳಗೊಂಡಿವೆ.
ಮಹಾರಾಷ್ಟ್ರದಲ್ಲಿ ರವಿವಾರ 67160 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದು ದೇಶದಲ್ಲೇ ಅತ್ಯಧಿಕವಾಗಿದೆ. ಉತ್ತರಪ್ರದೇಶದಲ್ಲಿ 37,944 ಹಾಗೂ ಕರ್ನಾಟಕದಲ್ಲಿ 29,438 ಪ್ರಕರಣಗಳು ವರದಿಯಾಗಿವೆ.
ಭಾರತದಲ್ಲಿ ಕೊರೋನ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 26,82,751ಕ್ಕೇರಿದ್ದು, ಇದು ದೇಶದಲ್ಲಿ ವರದಿಯಾಗಿರುವ ಒಟ್ಟು ಪ್ರಕರಣಗಳ 15.82 ಶೇ. ಆಗಿದೆ. ಕಳೆದ 24 ತಾಸುಗಳ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯ ಲ್ಲಿ 1,29,811ರಷ್ಟು ಏರಿಕೆಯಾಗಿದೆ.
ದೇಶದ ಸಕ್ರಿಯ ಕೋವಿಡ್-19 ಪ್ರಕರಣಗಳ ಪೈಕಿ ಶೇ.69.94ರಷ್ಟು ಪ್ರಕರಣಗಳನ್ನು ಮಹಾರಾಷ್ಟ್ರ, ಚತ್ತೀಸ್ಗಢ, ಉತ್ತರಪ್ರದೇಶ, ಕರ್ನಾಟಕ, ರಾಜಸ್ಥಾನ, ತಮಿಳುನಾಡು, ಗುಜರಾತ್ ಹಾಗೂ ಕೇರಳ ರಾಜ್ಯಗಳು ಹೊಂದಿವೆಯೆಂದು ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರ, ಉತ್ತರಪ್ರದೇಶ, ದಿಲ್ಲಿ ಕರ್ನಾಟಕ, ಚತ್ತೀಸ್ಗಢ, ಮಧ್ಯಪ್ರದೇಶ, ಕೇರಳ, ಗುಜರಾತ್, ತಮಿಳುನಾಡು, ರಾಜಸ್ಥಾನ, ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆಯ ಗತಿಯಲ್ಲಿವೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ರಾಷ್ಟ್ರಮಟ್ಟದಲ್ಲಿ ಸೋಂಕಿತರ ಸಾವಿನ ಪ್ರಮಾಣದಲ್ಲಿ ಕುಸಿಯತೊಡಗಿದ್ದು, ಪ್ರಸಕ್ತ ಅದು 1.13 ಶೇಕಡದಲ್ಲಿ ಸ್ಥಿರಗೊಂಡಿದೆ. ರವಿವಾರ ಬೆಳಗ್ಗಿನ ತನಕ ಕಳೆದ 24 ತಾಸುಗಳಲ್ಲಿ 2767 ಸಾವಿನ ಪ್ರಕರಣಗಳು ವರದಿಯಾಗಿವೆ.







