ಆಮ್ಲಜನಕ ಕೊರತೆಯ ನಡುವೆ ಸೆಂಟ್ರಲ್ ವಿಸ್ತಾ ಯೋಜನೆಗೆ ಬಿಡ್ಡಿಂಗ್: ದಿಲ್ಲಿ ನಾಗರಿಕರ ಆಕ್ರೋಶ

Photo: HCP Designs
ಹೊಸದಿಲ್ಲಿ, ಎ. 25: ಕೊರೋನ ಸೋಂಕಿತರಾದ ಜನರು ಆಮ್ಲಜನಕದ ಕೊರತೆಯಿಂದ ಸಾಯುತ್ತಿರುವ ನಡುವೆ ಸೆಂಟ್ರಲ್ ವಿಸ್ತಾ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಿಲ್ಲಿ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು thefederal.com ವರದಿ ಮಾಡಿದೆ.
ಕೊರೋನ ಬಿಕ್ಕಟ್ಟಿನ ಸಂದರ್ಭದಲ್ಲೂ ಸೆಂಟ್ರಲ್ ವಿಸ್ತಾ ನಿರ್ಮಾಣಕ್ಕೆ ಆದ್ಯತೆ ನೀಡಿರುವ ಕೇಂದ್ರ ಸರಕಾರ 3,408 ಕೋಟಿ ರೂಪಾಯಿ ಅಂದಾಜು ವೆಚ್ಚದ ಮೊದಲ ಮೂರು ಕಟ್ಟಡಗಳ ನಿರ್ಮಾಣಕ್ಕೆ ಬಿಡ್ಡಿಂಗ್ ಆಹ್ವಾನಿಸಿದೆ.
ಮೋದಿ ಸರಕಾರ ದೇಶದ ಜನರನ್ನು ರಕ್ಷಿಸಲು ಆದ್ಯತೆ ನೀಡುತ್ತಿಲ್ಲ. ಬದಲಾಗಿ ಜನರಿಗೆ ಯಾವುದೇ ರೀತಿಯಲ್ಲಿ ಉಪಯೋಗವಾಗದ ಕಟ್ಟಡಗಳನ್ನು ನಿರ್ಮಿಸಲು ಹೊರಟಿದೆ. ಪ್ರಸ್ತುತ ಆಮ್ಲಜನಕ, ಲಸಿಕೆ, ಆರೋಗ್ಯ ಸೇವೆ ಹಾಗೂ ಔಷಧಕ್ಕೆ ಹಣದ ಅವಶ್ಯಕತೆ ಇದೆ. ಆದರೆ, ಅವರು ನಾಗರಿಕರಿಗೆ ಯಾವುದೇ ಉಪಯೋಗ ಇಲ್ಲದ ಕಟ್ಟಡಗಳನ್ನು ನಿರ್ಮಾಣ ಮಾಡಲು ಹಣದ ದುರುಪಯೋಗ ಮಾಡುತ್ತಿದ್ದಾರೆ ಎಂದು ದಿಲ್ಲಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಅಭಯ್ ಅರೋರಾ ಹೇಳಿದ್ದಾರೆ.
ಸೆಂಟರ್ ವಿಸ್ತಾ ಯೋಜನೆ ಅಡಿಯಲ್ಲಿ ಸಚಿವರಿಗಾಗಿ ನೂತನ ಒಂದೇ ಕೇಂದ್ರ ಕಾರ್ಯಾಲಯ ನಿರ್ಮಿಸುವ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯ 3,408 ಕೋಟಿಗಳ ಅಂದಾಜು ವೆಚ್ಚದ ಮೊದಲ ಮೂರು ಕಟ್ಟಡಗಳಿಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಟೆಂಡರ್ ಆಹ್ವಾನಿಸುವ ಮೂಲಕ ಚಾಲನೆ ನೀಡಿದೆ.
ಸೆಂಟ್ರಲ್ ವಿಸ್ತಾ ಮರು ಅಭಿವೃದ್ಧಿ ಯೋಜನೆಯ ಭಾಗವಾಗಿ ಈಗ ಅಸ್ತಿತ್ವದಲ್ಲಿರುವ ಹೆಚ್ಚಿನ ಕಟ್ಟಡಗಳನ್ನು ಧ್ವಂಸಗೊಳಿಸಿದ ಬಳಿಕ ರಾಜಪಥದಲ್ಲಿ ಹತ್ತು ನೂತನ ಕಾರ್ಯಾಲಯದ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿದೆ. ಸೆಂಟ್ರಲ್ ವಿಸ್ತಾದ ನೂತನ ಸಂಸತ್ ಕಟ್ಟಡದ ಶಂಕು ಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2020 ಡಿಸೆಂಬರ್ 10ರಂದು ನೆರವೇರಿಸಿದ್ದರು.
ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ 3 ಕಿ.ಮೀ. ರಾಜಪಥದ ಒಂದು ಭಾಗವಾಗಿ ಸರಕಾರಿ ಕಟ್ಟಡಗಳನ್ನು ಮರು ನಿರ್ಮಾಣ ಮಾಡುವ ಗುರಿ ಹೊಂದಿರುವ ಮೂರು ನೂತನ ಕಟ್ಟಡಗಳ ನಿರ್ಮಾಣ 20,000 ಕೋಟಿ ರೂಪಾಯಿ ವೆಚ್ಚದ ಸೆಂಟ್ರಲ್ ವಿಸ್ತಾ ಯೋಜನೆಯ ಒಂದು ಭಾಗವಾಗಿದೆ.