ಐಪಿಎಲ್: ಸನ್ ರೈಸರ್ಸ್ ವಿರುದ್ಧ ಡೆಲ್ಲಿ ‘ಸೂಪರ್’ ಓವರ್ ಗೆಲುವು

ಚೆನ್ನೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ 20ನೇ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೂಪರ್ ಓವರ್ ನಲ್ಲಿ ರೋಚಕ ಜಯ ಸಾಧಿಸಿತು.
ಐದರಲ್ಲಿ 4ನೇ ಗೆಲುವು ಸಾಧಿಸಿದ ಡೆಲ್ಲಿ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.
ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ಕೇವಲ 7 ರನ್ ಗಳಿಸಿತು. ಗೆಲ್ಲಲು 8 ರನ್ ಗುರಿ ಪಡೆದ ಡೆಲ್ಲಿ ಆರನೇ ಎಸೆತದಲ್ಲಿ ಗೆಲುವಿನ ನಗೆ ಬೀರಿತು.
ಗೆಲ್ಲಲು 160 ರನ್ ಬೆನ್ನಟ್ಟಿದ ಹೈದರಾಬಾದ್ ಅಗ್ರ ಸರದಿಯ ಬ್ಯಾಟ್ಸ್ ಮನ್ ಕೇನ್ ವಿಲಿಯಮ್ಸನ್ (ಔಟಾಗದೆ 66, 51 ಎಸೆತ, 8 ಬೌಂಡರಿ)ಏಕಾಂಗಿ ಹೋರಾಟದ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಪಂದ್ಯವನ್ನು ಟೈ ಗೊಳಿಸಿತು.
ಹೈದರಾಬಾದ್ ಕೊನೆಯ ತನಕ ಹೋರಾಟ ನೀಡಿತು. ಕನ್ನಡಿಗ ಜಗದೀಶ ಸುಚಿತ್ (ಔಟಾಗದೆ 14, 6 ಎಸೆತ, 2 ಬೌಂಡರಿ, 1 ಸಿಕ್ಸರ್)ಒಂದಷ್ಟು ಪ್ರತಿರೋಧ ತೋರಿ ವಿಲಿಯಮ್ಸನ್ ಗೆ ಸಾಥ್ ನೀಡಿದರು. ಕೊನೆಯ ಓವರ್ ಬೌಲಿಂಗ್ ಮಾಡಿದ ಕಾಗಿಸೊ ರಬಾಡ ಹೈದರಾಬಾದ್ ತಂಡವನ್ನು 7 ವಿಕೆಟ್ ನಷ್ಟಕ್ಕೆ 159 ರನ್ ಗೆ ನಿಯಂತ್ರಿಸಿದರು.
ಡೆಲ್ಲಿ ಪರ ಅವೇಶ್ ಖಾನ್(3-34) ಹಾಗೂ ಅಕ್ಷರ್ ಪಟೇಲ್ (2-26) ಐದು ವಿಕೆಟ್ ಹಂಚಿಕೊಂಡರು.
ಆರಂಭಿಕ ಆಟಗಾರ ಡೇವಿಡ್ ವಾರ್ನರ್ (6)ಅಲ್ಪ ಮೊತ್ತಕ್ಕೆ ಔಟಾದರು. ಇನ್ನೋರ್ವ ಆರಂಭಿಕ ಬ್ಯಾಟ್ಸ್ ಮನ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜಾನಿ ಬೈರ್ ಸ್ಟೋವ್(38, 18 ಎಸೆತ)ಗಳಿಸಿದರು.
ಡೆಲ್ಲಿ 159/4: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ.
ಡೆಲ್ಲಿ ಪರ ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ ಸರ್ವಾಧಿಕ ಸ್ಕೋರ್(53, 39 ಎಸೆತ, 7 ಬೌಂ., 1 ಸಿ.)ಗಳಿಸಿದರು. ಶಿಖರ್ ಧವನ್(28, 26 ಎಸೆತ)ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಶಾ ಮೊದಲ ವಿಕೆಟ್ ಗೆ 81 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ನಾಯಕ ರಿಷಭ್ ಪಂತ್ (37, 27 ಎಸೆತ) ಹಾಗೂ ಸ್ಟೀವನ್ ಸ್ಮಿತ್(ಔಟಾಗದೆ 34, 25 ಎಸೆತ)ಎರಡಂಕೆಯ ಸ್ಕೋರ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಸಿದ್ದಾರ್ಥ್ ಕೌಲ್ (2-31) ಯಶಸ್ವಿ ಬೌಲರ್ ಎನಿಸಿಕೊಂಡರು.